ADVERTISEMENT

ವೈ.ಎನ್.ಹೊಸಕೋಟೆ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 15:15 IST
Last Updated 19 ಸೆಪ್ಟೆಂಬರ್ 2024, 15:15 IST
ವೈ.ಎನ್.ಹೊಸಕೋಟೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಆಂಬುಲೆನ್ಸ್ ಸೇವೆ ಆರಂಭಗೊಂಡಿತು
ವೈ.ಎನ್.ಹೊಸಕೋಟೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಆಂಬುಲೆನ್ಸ್ ಸೇವೆ ಆರಂಭಗೊಂಡಿತು   

ವೈ.ಎನ್.ಹೊಸಕೋಟೆ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಅಂಬುಲೆನ್ಸ್ ಸೇವೆ ಗುರುವಾರದಿಂದ ಮತ್ತೆ ಆರಂಭವಾಯಿತು.

ಬುಧವಾರ ಚಿಕಿತ್ಸೆಗಾಗಿ ಬಂದು ಮೃತರಾಗಿದ್ದ ದಳವಾಯಿಹಳ್ಳಿ ಗ್ರಾಮದ ಹೊನ್ನೂರಪ್ಪ ಅವರ ಮೃತದೇಹವನ್ನು ಸಾಗಿಸಲು ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಲಭಿಸದ ಕಾರಣ ಬೈಕ್‌ನಲ್ಲಿ ಶವ ಸಾಗಿಸಲಾಗಿತ್ತು. 

ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ತಾಲ್ಲೂಕು ಕೇಂದ್ರದಲ್ಲಿದ್ದ ಆಂಬುಲೆನ್ಸ್‌ಗಳಲ್ಲಿ ಒಂದನ್ನು ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ನಿಯೋಜಿಸಿದ್ದಾರೆ. ಇನ್ನು ಮುಂದೆ ಈ ಕೇಂದ್ರದಲ್ಲಿ ಆಂಬುಲೆನ್ಸ್ ಸೇವೆ ನಿರಂತರವಾಗಿರುತ್ತದೆ. ಇಲ್ಲಿ ಖಾಲಿ ಇರುವ ಚಾಲಕ ಹುದ್ದೆಯನ್ನು ಭರ್ತಿ ಮಾಡಲಾಗುವುದು ಎಂದಿದ್ದಾರೆ.

ADVERTISEMENT

ಆಸ್ಪತ್ರೆಯಲ್ಲಿ ಈ ಹಿಂದೆ ಇದ್ದ ಆಂಬುಲೆನ್ಸ್ ಹಳೆಯದಾಗಿತ್ತು. ಚಾಲಕರ ಸಮಸ್ಯೆಯೂ ಇತ್ತು. ಹಾಗಾಗಿ 2019ರಿಂದ ಆಂಬುಲೆನ್ಸ್ ಸೇವೆ ಸ್ಥಗಿತಗೊಂಡಿತ್ತು. ಅಗತ್ಯವಿದ್ದಾಗ ‘108’ರ ಸಹಾಯ ಪಡೆಯಲಾಗುತ್ತಿತ್ತು. ಕೆಲವೊಮ್ಮೆ ‘108’ ಬರುವುದು ತಡವಾಗಿ ಹಲವು ತೊಂದರೆ ಎದುರಾಗಿತ್ತು. ಸ್ಥಳೀಯರು ಆಂಬುಲೆನ್ಸ್‌ಗಾಗಿ ಸಂಬಂಧಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.

ಗ್ರಾಮದ ಹೊರವಲಯದಲ್ಲಿ ಸರ್ಕಾರಿ ಆಸ್ಪತ್ರೆ ಇದ್ದು, ರೋಗಿಗಳು ಸಕಾಲದಲ್ಲಿ ಓಡಾಡಲು ಆಟೊ ಅಥವಾ ದ್ವಿಚಕ್ರ ವಾಹನಗಳನ್ನು ಅವಲಂಬಿಸಬೇಕಿದೆ. ರಾತ್ರಿ ಪಾಳಿಯ ವೈದ್ಯರಿಲ್ಲದೆ ತುರ್ತು ಚಿಕಿತ್ಸೆ ದೊರೆಯುತ್ತಿಲ್ಲ. ಸುಸಜ್ಜಿತ ಕಟ್ಟಡ ಮತ್ತು ಕೊಠಡಿಗಳಿದ್ದರೂ ಶಸ್ತ್ರಚಿಕಿತ್ಸಾ ಸಿಬ್ಬಂದಿ ಮತ್ತು ಲ್ಯಾಬ್ ತಂತ್ರಜ್ಞರ ಕೊರತೆಯಿಂದ ತೊಂದರೆಯಾಗುತ್ತಿದ್ದು, ಉಪಕರಣಗಳು ತುಕ್ಕು ಹಿಡಿಯುತ್ತಿವೆ. ರಾತ್ರಿ ಕಾವಲುಗಾರರು ಇಲ್ಲದೆ ರಾತ್ರಿ ಪಾಳಿಯ ಸಿಬ್ಬಂದಿ ಭಯದಲ್ಲಿಯೇ ಕರ್ತವ್ಯ ನಿರ್ವಹಿಸುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ಕಾಡುತ್ತಿದೆ. ಇಲ್ಲಿದ್ದ ಮಕ್ಕಳ ವೈದ್ಯರನ್ನು ತಾಲ್ಲೂಕು ಕೇಂದ್ರಕ್ಕೆ ನಿಯೋಜಿಸಲಾಗಿದೆ. ಇಂತಹ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಸರ್ಕಾರಿ ಆಸ್ಪತ್ರೆಗೆ ಅಗತ್ಯ ಕಾಯಕಲ್ಪ ಬೇಕಾಗಿದೆ. ಗ್ರಾಮದ ಹೃದಯ ಭಾಗದಲ್ಲಿ ನಿರುಪಯುಕ್ತವಾಗಿರುವ ಹಳೆಯ ಸರ್ಕಾರಿ ಆಸ್ಪತ್ರೆ ಕಟ್ಟಡವನ್ನು ರಾತ್ರಿ ಸೇವೆಗೆ ಬಳಸಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.