ADVERTISEMENT

ಮೆಟ್ರೊ ತುಮಕೂರಿನವರೆಗೆ ವಿಸ್ತರಣೆಗೆ ಮನವಿ: ಜೆಸಿಎಂ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 16:23 IST
Last Updated 21 ಫೆಬ್ರುವರಿ 2021, 16:23 IST
ಗುಬ್ಬಿಯಲ್ಲಿ ಜೋಡಿ ರೈಲ್ವೆ ಹಳಿ ಉದ್ಘಾಟಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ಸಂಸದ ಜಿ.ಎಸ್. ಬಸವರಾಜು
ಗುಬ್ಬಿಯಲ್ಲಿ ಜೋಡಿ ರೈಲ್ವೆ ಹಳಿ ಉದ್ಘಾಟಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ಸಂಸದ ಜಿ.ಎಸ್. ಬಸವರಾಜು   

ಗುಬ್ಬಿ: ಮೆಟ್ರೊ ರೈಲು ಸಂಪರ್ಕವನ್ನು ಬೆಂಗಳೂರಿನಿಂದ ತುಮಕೂರಿನವರೆಗೆ ವಿಸ್ತರಿಸಿದರೆ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುವುದು. ರಸ್ತೆಯಲ್ಲಿ ವಾಹನದಟ್ಟಣೆ ನಿಯಂತ್ರಣ ಸಾಧ್ಯ. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಧುಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಭಾನುವಾರು ಗುಬ್ಬಿ ಮತ್ತು ನಿಟ್ಟೂರು ನಡುವೆ 9 ಕಿಲೋಮೀಟರ್ ಉದ್ದದ ಜೋಡಿ ರೈಲ್ವೆ ಹಳಿ ಉದ್ಘಾಟಿಸಿ ಮಾತನಾಡಿದರು.

ಅರಸಿಕೆರೆವರೆಗೆ ಬಾಕಿ ಉಳಿದಿರುವ 22 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡರೆ ಬೀದರ್ ಮಾರ್ಗ ಬೆಳಗಾವಿಯಿಂದ ಬೆಂಗಳೂರಿನವರೆಗೆ ನಿರಂತರ ಜೋಡಿ ಹಳಿ ಸಂಪರ್ಕ ಸಾಧ್ಯವಾಗುತ್ತದೆ. ದುದ್ದ- ತಿಪಟೂರು ನಡುವಿನ 22 ಕಿಲೋಮೀಟರ್ ಹಳಿಯನ್ನು ಸಂಪರ್ಕ ಮಾಡಿದರೆ ಮಂಗಳೂರು ಕಡೆ ಪ್ರಯಾಣಕ್ಕೆ ಅನುಕೂಲವಾಗುವುದು. ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಕಷ್ಟು ರೈಲ್ವೆ ಅಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದರು.

ADVERTISEMENT

ಸಂಸದ ಜಿಎಸ್ ಬಸವರಾಜು ಮಾತನಾಡಿ, ಪಟ್ಟಣದಲ್ಲಿ ನಿರ್ಮಿಸಿರುವ ರೈಲ್ವೆ ಕೆಳಸೇತುವೆ ತುಂಬಾ ಅನಾನುಕೂಲಕರವಾಗಿದೆ. ಇದಕ್ಕೆ ಬದಲಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ತುಮಕೂರಿನವರೆಗೂ ಇರುವ ಎಲೆಕ್ಟ್ರಿಕ್ ರೈಲಿನ ಸೌಲಭ್ಯವನ್ನು ಅರಸೀಕೆರೆವರಗೆ ವಿಸ್ತರಿಸುವಂತೆ ಮನವಿ ಮಾಡಲಾಗುವುದು. ಚಳ್ಳಕೆರೆ, ಹಿರಿಯೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮೂಲಕ ಮಂಗಳೂರು ಟ್ರ್ಯಾಕ್‌ಗೆ ಲಿಂಕ್ ಕಲ್ಪಿಸುವ ಯೋಜನೆ ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ತುಮಕೂರಿನಿಂದ ಕುಣಿಗಲ್ ಮೂಲಕ ಮದ್ದೂರು, ಮಂಡ್ಯ ರೈಲ್ವೆ ಹಳಿ ನಿರ್ಮಾಣವಾದರೆ ಅನುಕೂಲವಾಗುತ್ತದೆ ಎಂದರು.

ಕೇಂದ್ರ ಸಚಿವ ಪಿಯೂಷ್‌ ಗೋಯಲ್ ಜೋಡಿ ರೈಲ್ವೆ ಹಳಿಗಳನ್ನು ವಿಡಿಯೊ ಸಂಪರ್ಕದ ಮೂಲಕ ಉದ್ಘಾಟಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.