ADVERTISEMENT

ಮದಲೂರು ಕೆರೆಗೆ ನೀರು: ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 16:34 IST
Last Updated 8 ಸೆಪ್ಟೆಂಬರ್ 2020, 16:34 IST
ಶಿರಾ ತಾಲ್ಲೂಕು ಮದಲೂರು ಕೆರೆಗೆ ನೀರು ಹರಿಸುವಂತೆ ಕೋರಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.
ಶಿರಾ ತಾಲ್ಲೂಕು ಮದಲೂರು ಕೆರೆಗೆ ನೀರು ಹರಿಸುವಂತೆ ಕೋರಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.   

ತುಮಕೂರು: ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಕೆರೆಗೆ ನೀರು ಹರಿಸಲು ಆದೇಶಿಸುವುದಾಗಿ ಭರವಸೆ ನೀಡಿದರು ಎಂದು ಸುರೇಶ್‌ಗೌಡ ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ ಹೇಮಾವತಿ ನೀರು ಸಾಕಷ್ಟು ಹರಿಯುತ್ತಿದೆ. ಹೆಚ್ಚುವರಿ ನೀರನ್ನು ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹರಿಸಬಹುದು. ಆದರೆ, ಈ ಕೆರೆಗೆ ಹೇಮಾವತಿ ನೀರು ಹಂಚಿಕೆಯಾಗದ ಕಾರಣ ನೀರು ಹರಿಸುತ್ತಿಲ್ಲ ಎಂದು ತಿಳಿಸಿದರು.

ADVERTISEMENT

ಜನರು ಕುಡಿಯುವ ನೀರಿಗೂ ಕಷ್ಟಪಡುತ್ತಿದ್ದಾರೆ. ಮಳೆಗಾ‌ಲದಲ್ಲೂ ಫ್ಲೋರೈಡ್ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಕೆರೆಗೆ ನೀರು ಹರಿಸಲು ಆದೇಶಿಸಬೇಕು ಎಂದು ಕೋರಿದರು.

ಹೇಮಾವತಿ ನೀರು ಹೆಚ್ಚಾಗಿ ಹರಿಯುತ್ತಿರುವುದರಿಂದ ತಾಲ್ಲೂಕಿನ ಜನರ ಹಿತಾದೃಷ್ಟಿಯಿಂದ 0.250 ಟಿಎಂಸಿ ನೀರು ಹರಿಸಲು ಆದೇಶಿಸಬೇಕು. ಒಂದು ವರ್ಷ ಕೆರೆ ತುಂಬಿಸಿದರೆ 6–7 ವರ್ಷ ಅಂತರ್ಜಲ ವೃದ್ಧಿಯಾಗಲಿದೆ ಎಂದು ಮನವಿ ಮಾಡಿದರು.

ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ಮುಖಂಡರಾದ ಎಸ್.ಆರ್.ಗೌಡ, ಚಿದಾನಂದಗೌಡ, ಬಿ.ಕೆ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.