ADVERTISEMENT

ಕೊರಟಗೆರೆ | ಕೊಳವೆಬಾವಿ ಕೇಬಲ್ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಮೇ 2024, 14:48 IST
Last Updated 18 ಮೇ 2024, 14:48 IST
ವೆಂಕಟೇಶ
ವೆಂಕಟೇಶ   

ಕೊರಟಗೆರೆ: ತಾಲ್ಲೂಕು ಸೇರಿದಂತೆ ವಿವಿಧೆಡೆಗಳಲ್ಲಿ ಕೊಳವೆಬಾವಿ ಕೇಬಲ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬೆಂಗಳೂರು ಬಸವೇಶ್ವರ ನಗರ ನಿವಾಸಿಗಳಾದ ವೆಂಕಟೇಶ, ರಾಘವೇಂದ್ರ, ವಿನೇಶ್ ಪಾಟೀಲ್ ಬಂಧಿತರು.

ವೆಂಕಟೇಶ ಪ್ರಮುಖ ಆರೋಪಿಯಾಗಿದ್ದು, ಈತ ರಾಂಘವೇಂದ್ರನಿಗೆ ತಿಂಗಳಿಗೆ ₹20 ಸಾವಿರ ಸಂಬಳ ಕೊಟ್ಟು ಕಳ್ಳತನದ ಕೆಲಸಕ್ಕೆ ಇಟ್ಟುಕೊಂಡಿದ್ದ. ಕದ್ದ ವಸ್ತುಗಳನ್ನು ವಿನೀಶ್ ಪಾಟೀಲ್ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದ ಎಂದು ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿಗಳು ಐದಾರು ತಿಂಗಳಿನಿಂದ ತಾಲ್ಲೂಕಿನ ಹಲವು ಭಾಗಗಳಲ್ಲಿ ರೈತರ ಕೊಳವೆ ಬಾವಿಗೆ ಹಾಕಲಾಗಿದ್ದ ಕೇಬಲ್‌ಗಳನ್ನು ಕಳ್ಳತನ ಮಾಡುತ್ತಿದ್ದರು. ಈ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಪ್ರಕರಣ ದಾಖಲಾಗಿದ್ದವು. ಒಂದು ತಿಂಗಳಲ್ಲಿ ಐದಾರು ಕೇಬಲ್ ಕಳ್ಳತನ ಪ್ರಕರಣ ದಾಖಲಾಗುತ್ತಿದ್ದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.

ಈಚೆಗೆ ವಡ್ಡಗೆರೆ ಸಮೀಪದ ಕೊಳವೆಬಾವಿಯೊಂದರಲ್ಲಿ ಕೇಬಲ್ ಕಳ್ಳತನ ಮಾಡುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಜಾಡು ಹಿಡಿದ ಸಿಪಿಐ ಆರ್.ಪಿ. ಅನಿಲ್, ಪಿಎಸ್ಐ ಬಿ.ಮಂಜುನಾಥ ಹಾಗೂ ಸಿಬ್ಬಂದಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ಆರೋಪಿಗಳನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

ಕಳ್ಳತನಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮೋಹನ್, ದೊಡ್ಡಲಿಂಗಯ್ಯ, ಸಂಜೀವರಾಜು ಭಾಗವಹಿಸಿದ್ದರು.

ರಾಘವೇಂದ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.