ADVERTISEMENT

ಗೌರವಧನಕ್ಕಾಗಿ ‘ಆಶಾ’ರ ಪ್ರತಿಭಟನೆ

ಆಶಾ ಸಾಫ್ಟ್‌ನಿಂದ ಮೊತ್ತ ನೀಡದಿರಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:30 IST
Last Updated 9 ಜುಲೈ 2019, 19:30 IST
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆಶಾ ಕಾರ್ಯಕರ್ತೆಯರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆಶಾ ಕಾರ್ಯಕರ್ತೆಯರು   

ತುಮಕೂರು: ಪ್ರತಿ ತಿಂಗಳಿಗೆ ಕನಿಷ್ಠ ₹ 12,000 ಗೌರವಧನವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌(ಎಐಟಿಯುಸಿ)ನಲ್ಲಿ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತುಮಕೂರು ಜಿಲ್ಲಾ ಘಟಕ ಪ್ರತಿಭಟನೆಯ ನೇತೃತ್ವ ವಹಿಸಿತ್ತು.

ಆಶಾ ಸಾಫ್ಟ್‌, ಆರ್‌ಸಿಎಚ್‌ ಪೋರ್ಟಲ್‌ ಮೂಲಕ ಗೌರವಧನ ನೀಡುವ ಪದ್ಧತಿಯನ್ನು ನಿಲ್ಲಿಸಬೇಕು. 10 ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿರುವ ತಾಯಂದಿರ ಮತ್ತು ಮಕ್ಕಳ ಆರೋಗ್ಯದ ಮೇಲ್ವಿಚಾರಣ ಕಾರ್ಯದ(ಎಂಸಿಟಿಎಸ್‌) ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾನಿರತ ಕಾರ್ಯಕರ್ತೆಯರು ಒತ್ತಾಯಿಸಿದರು.

ADVERTISEMENT

ಆಂಧ್ರಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಗೆ ₹ 10,000 ಗೌರವಧನ ನಿಗದಿಯಾಗಿದೆ. ಮುಖ್ಯಮಂತ್ರಿ ಈ ಹಿಂದೆ ನೀಡಿದ್ದ ಭರವಸೆಯ ಅನುಸಾರ ರಾಜ್ಯ ಮತ್ತು ಕೇಂದ್ರದ ಅನುದಾನದಿಂದ ₹ 12,000 ಗೌರವಧನ ನೀಡಬೇಕು ಎಂದು ಆಗ್ರಹಿಸಿದರು.

ಎಐಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ವಿ.ಭಟ್‌, ಕಾರ್ಯಕರ್ತೆಯರಿಗೆ ಪ್ರತಿ ತಿಂಗಳೂ ಸರಿಯಾಗಿ ಗೌರವಧನ ಬರುತ್ತಿಲ್ಲ. ಅವರ ಜೀವನ ನಿರ್ವಹಣೆ ಇದರಿಂದ ಕಷ್ಟವಾಗಿದೆ. ಆಶಾ ಸಾಫ್ಟ್‌ನಿಂದ ಧನ ವರ್ಗಾವಣೆಯಿಂದ ಕಾರ್ಯಕರ್ತೆಯರಿಗೆ ಹಣಕಾಸಿನ ನಷ್ಟವಾಗುತ್ತಿದೆ. ಅದಲ್ಲದೆ ರಾಜ್ಯ ಸರ್ಕಾರ ಮಾಸಿಕ ಧನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ. ಈಗಲೂ ಕೆಲವು ತಾಲ್ಲೂಕುಗಳಲ್ಲಿ 4 ತಿಂಗಳಿನ ಗೌರವಧನ ಬಂದಿಲ್ಲ ಆರೋಪಿಸಿದರು.

ಗೌರವಧನ ವಿತರಿಸುವ ವಿಧಾನಗಳನ್ನು ಮೂರ್ನಾಲ್ಕು ವರ್ಷಗಳಿಂದ ಬದಲಿಸುತ್ತಲೇ ಬರುತ್ತಿದ್ದಾರೆ. ಈಗ ಆರ್‌ಸಿಎಚ್‌ ಎಂಬ ಹೊಸ ಪೊರ್ಟಲ್‌ ಮೂಲಕ ಧನ ನೀಡಲು ವಿಳಂಬ ಮಾಡುತ್ತಿದ್ದಾರೆ. ಬಡ ಆಶಾ ಕಾರ್ಯಕರ್ತೆಯರ ಮೇಲೆ ಈ ರೀತಿಯ ಪ್ರಯೋಗ ಮಾಡುತ್ತಿದ್ದಾರೆ. ಹೊಸ ವಿಧಾನ ಜಾರಿಗೆ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಆಶಾರಿಗೆ ಸಕಾಲಕ್ಕೆ ಹಣ ಸಿಗದೆ ಪರದಾಡುವಂತಾಗುತ್ತದೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳು ನೀಡುವ ಎಂಸಿಟಿಎಸ್ ಸೇವೆಗಳ ಅನುಸಾರ ಗೌರವಧನ ನೀಡಬೇಕು. ಇದಕ್ಕಾಗಿ ಮ್ಯಾನುವಲ್ ವರದಿ ಸಂಗ್ರಹಿಸಿ ಧನ ಪಾವತಿ ಮಾಡಬೇಕು. 1,000 ಜನಸಂಖ್ಯೆಗೆ ಕಾರ್ಯನಿರ್ವಹಿಸುವ ಪ್ರತಿ ಆಶಾ ಅವರಿಗೆ ₹ 3,000 ನೀಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರು ಬರೆದ ಮನವಿ ಪತ್ರವನ್ನು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಚಂದ್ರಿಕಾ ಮತ್ತು ಆರ್‌ಸಿಎಚ್‌ ಅಧಿಕಾರಿ ಕೇಶವ ರಾಜ್ ಅವರು ಸ್ವೀಕರಿಸಿದರು. ಒಂದು ವಾರದೊಳಗೆ ಆಶಾ ಅವರ ಸಮಸ್ಯೆಗಳ ಬಗ್ಗೆ ಸಭೆ ನಡೆಸುತ್ತೇವೆ. ಅಲ್ಲಿಗೆ ಸಂಘಟನೆಯ ಮುಖಂಡರನ್ನೂ ಆಹ್ವಾನಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದರು.

ಸಂಘಟನೆಯ ಮುಖಂಡರಾದ ಮಂಜುಳಾ, ಪದ್ಮರೇಖಾ, ಪುಷ್ಪಲತಾ, ವಸಂತ, ಲಕ್ಷ್ಮಿ, ವಿನೋದಾ, ಶಶಿಕಲಾ, ಯಶೋಧಾ, ಮೀನಾಕ್ಷಿ, ಎಚ್.ಎಸ್‌.ಲತಾ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.