ADVERTISEMENT

ಬೇಡಿಕೆ ಈಡೇರಿಕೆಗೆ ‘ಆಶಾ’ ಆಗ್ರಹ

ಆರ್‌ಸಿಎಚ್‌ ಪೋರ್ಟಲ್‌ ಸಮಸ್ಯೆಯಿಂದ ಗೌರವ ಧನ ಬಿಡುಗಡೆ ವಿಳಂಬ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 5:00 IST
Last Updated 28 ಡಿಸೆಂಬರ್ 2022, 5:00 IST
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು   

ತುಮಕೂರು: ಆಶಾ ಕ್ಷೇಮಾಭಿವೃದ್ಧಿನಿಧಿ ಸ್ಥಾಪನೆ, ಕಾರ್ಯಕರ್ತೆಯರಿಗೆ ಆರ್‌ಸಿಎಚ್‌ ಪೋರ್ಟಲ್‌ ಮೂಲಕ ಪ್ರೋತ್ಸಾಹ ಧನ ನೀಡುವುದನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಬಿಜಿಎಸ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಿತು. ನೂರಾರು ಕಾರ್ಯಕರ್ತೆಯರು ಹೆಜ್ಜೆ ಹಾಕಿದರು. ಕೇಂದ್ರ ಸರ್ಕಾರ ವಿವಿಧ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹ ಧನ ಒಟ್ಟುಗೂಡಿಸಿ ಗೌರವಧನ ನಿಗದಿಪಡಿಸಬೇಕು. ಆರ್‌ಸಿಎಚ್‌ ಪೋರ್ಟಲ್‌ನಲ್ಲಿನ ಸಮಸ್ಯೆಯಿಂದಾಗಿ ಹಲವರಿಗೆ ಗೌರವ ಧನ ಸಿಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಗೌರವಧನ ಹೆಚ್ಚಿಸಿ, ಪ್ರತಿ ತಿಂಗಳು ಪಾವತಿ ಮಾಡಬೇಕು. ಸೇವಾ ನಿವೃತ್ತಿ, ಸೇವಾ ಅವಧಿಯಲ್ಲಿ ಸ್ವಯಂ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಈಗಿರುವ ₹20 ಸಾವಿರ ಇಡಿಗಂಟನ್ನು ₹3 ಲಕ್ಷಕ್ಕೆ ಹೆಚ್ಚಿಸಬೇಕು. ತೀವ್ರ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳು ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವ ಧನ, ನಿಗದಿತ ಪ್ರೋತ್ಸಾಹ ಧನ ನೀಡಲು ಸೂಕ್ತ ಆದೇಶ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

‘ಆಶಾ’ದಿಂದ ಆಶಾ ಸುಗಮಕಾರರನ್ನು ಬೇರ್ಪಡಿಸಿ, ಅವರ ಹುದ್ದೆಗೆ ತಕ್ಕಂತೆ ಗೌರವ ಧನ ಮತ್ತು ಪ್ರಯಾಣ ಭತ್ಯೆ ನಿಗದಿ ಮಾಡಬೇಕು. ನಗರ ಪ್ರದೇಶಗಳಿಗೂ ಸುಗಮಕಾರರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್‌.ಎಸ್‌. ಲತಾ, ಸಂಚಾಲಕಿ ಮಂಜುಳಾ ಎಸ್‌. ಗೋನವಾರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.