ಪಾವಗಡ: ನರೇಗಾ ಕೆಲಸ ಮಾಡುವ ವಿಚಾರದಲ್ಲಿ ತಾಲ್ಲೂಕಿನ ಕೋಟಗುಡ್ಡ ಗ್ರಾಮದಲ್ಲಿ ಹಲ್ಲೆ, ಜಾತಿ ನಿಂದನೆ ಮಾಡಲಾಗಿದೆ ಎಂದು ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆಗೆ ಗ್ರಾಮದ ಮಹಿಳೆಯರು ದೂರು ನೀಡಿದ್ದಾರೆ.
ಗ್ರಾಮದ ಕೆರೆಯಲ್ಲಿ ಯಂತ್ರದಿಂದ ಹೂಳೆತ್ತುವ ವಿಚಾರದಲ್ಲಿ ಕೂಲಿ ಕಾರ್ಮಿಕರು, ಯಂತ್ರದಿಂದ ಕೆಲಸ ಮಾಡಿಸುವವರ ನಡುವೆ ಘರ್ಷಣೆ ನಡೆದಿದೆ. ಕೂಲಿ ಕಾರ್ಮಿಕರು ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆ ಬಳಿ ಭಾನುವಾರ ಸಂಜೆವರೆಗೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಜಗಳವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಚಳ್ಳಕೆರೆ ರಸ್ತೆಯಲ್ಲಿ 100 ರಿಂದ 140 ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಅನುಮೋದನೆ ನೀಡುವಂತೆ ಪತ್ರ ನೀಡಲಾಗಿತ್ತು. ಆದರೆ ಯಂತ್ರದಿಂದ ಕಾಮಗಾರಿ ನಡೆಸುವ ವಿಚಾರ ತಿಳಿದು ಸ್ಥಳಕ್ಕೆ ಹೋಗಿ ಕೆಲಸ ಮಾಡದಂತೆ ತಿಳಿಸಿದಾಗ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಅನಿತಾಲಕ್ಷ್ಮಿ ಎಂಬುವರು ಕೂಲಿಕಾರ್ಮಿಕರ ಪರವಾಗಿ ದೂರು ನೀಡಿದ್ದಾರೆ.
ಗ್ರಾಮದ ರಾಘವೇಂದ್ರ, ಈರಣ್ಣ, ಚಿತ್ತಪ್ಪ, ಲುಂಕಪ್ಪ, ಈರಣ್ಣ, ಅಕ್ಷಯ, ಉಮಾಪತಿ ಎಂಬುವರ ವಿರುದ್ಧ ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.