ADVERTISEMENT

ಅವರೆಕಾಯಿಗೆ ಮುಗಿಬಿದ್ದ ಪಟ್ಟಣಿಗರು

ಮೈಸೂರು, ಹುಣಸೂರು, ಮದ್ದೂರು, ದಾವಣಗೆರೆಗಳಿಂದ ಅವರೆ ಆವಕ

ಪಾಂಡುರಂಗಯ್ಯ ಎ.ಹೊಸಹಳ್ಳಿ
Published 14 ಡಿಸೆಂಬರ್ 2018, 17:28 IST
Last Updated 14 ಡಿಸೆಂಬರ್ 2018, 17:28 IST
ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿ ಅವರೆಕಾಯಿಕೊಳ್ಳುವಲ್ಲಿ ನಿರತರಾಗಿರುವ ಗ್ರಾಹಕರು
ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿ ಅವರೆಕಾಯಿಕೊಳ್ಳುವಲ್ಲಿ ನಿರತರಾಗಿರುವ ಗ್ರಾಹಕರು   

ತುರುವೇಕೆರೆ: ‘ಹಿಚುಕಿದ ಸೊಗಡವರೆಕಾಯಿ ಸಾಂಬಾರಿನ ಜೊತೆಗೆ ರಾಗಿ ಮುದ್ದೆ ಇದ್ದರೆ ಊಟದ ಮಜವೇ ಬೇರೆ’ -ಹೀಗೆಂದು ಪಟ್ಟಣದ ಶಕ್ತಿನಗರದ ಗೃಹಿಣಿ ಪಿ.ಮಂಜುಳಾ ಇಲ್ಲಿನ ದಬ್ಬೇಘಟ್ಟ ರಸ್ತೆ ಬದಿಯ ವ್ಯಾಪಾರಿಯಿಂದ 5 ಕೆ.ಜಿ ಅವರೇ ಕಾಯಿ ತೂಗಿಸಿಕೊಂಡು ರಾಶಿಯಿಂದ ಎರಡು ಅವರೆ ಕಾಯಿ ತೆಗೆದು ಮೂಸಿಕೊಂಡು ಹೇಳಿದರು.

‘ಅವರೆಕಾಯಿಯಿಂದ ಪಲಾವ್, ಕಾಂಗ್ರೆಸ್ ಕಡಲೆಬೀಜ, ಎಣ‍್ಣೆಗಾಳು, ಉಪ್ಪಿಟ್ಟು, ಚಪಾತಿಗೆ ಸಾಗು, ಹಿಚುಕಿದ ಸಾಂಬಾರು, ರೊಟ್ಟಿಹಿಟ್ಟಿನ ಜೊತೆಗೆ ಹಿಚುಕಿದ ಅವರೆ ಕಾಳು ಹಾಕಿ ಚಪಾತಿ, ಅವರೆಕಾಳು ಹಿಚುಕಿ ಬೇಯಿಸಿ ಕಾಯಿ ಬೆಲ್ಲ ಹಾಕಿ ಸಿಹಿ ಪೊಂಗಲ್‍, ಸಪ್ಪೆಸರು, ಬಸ್ಸಾರು- ಹೀಗೆ ವಿವಿಧ ಬಗೆಯ ಪಾಕ ತಯಾರಿಸಬಹುದು’ ಎನ್ನುತ್ತಾರೆ ಮಂಜುಳಾ.

ಪಟ್ಟಣದ ಅಂಬೇಡ್ಕರ್ ವೃತ್ತ, ಬಿರ್ಲಾ ವೃತ್ತ, ತಾಲ್ಲೂಕು ಕಚೇರಿ ರಸ್ತೆ, ದಬ್ಬೇಘಟ್ಟ, ಬಾಣಸಂದ್ರ, ಮಾಯಸಂದ್ರ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ರಾಶಿ ಅವರೆಕಾಯಿ ಸುರಿದುಕೊಂಡು ವ್ಯಾಪಾರ ಮಾಡುತ್ತಾರೆ. ಪಟ್ಟಣಿಗರು ಅವರೆಕಾಯಿ ಕೊಳ್ಳಲು ನಿತ್ಯವೂ ಮುಗಿಬೀಳುವ ದೃಶ್ಯ ಸಾಮಾನ್ಯವಾಗಿದೆ.

ADVERTISEMENT

ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ದುರ್ಬಲದಿಂದಾಗಿ ಕಡಿಮೆ ಪ್ರಮಾಣದಲ್ಲಿ ಅವರೆಕಾಳು ಬಿತ್ತನೆಯಾಗಿದೆ. ಇರುವ ಅವರೆ ಗಿಡ ಹೂವು ಕಟ್ಟಿ, ಬಲಿಯುವ ಸಂದರ್ಭದಲ್ಲಿ ಮಳೆ ಮತ್ತು ಕೊರೆ ಸರಿಯಾಗಿ ಬೀಳಲಿಲ್ಲ. ಹಾಗಾಗಿ ಡಿಸೆಂಬರ್ ಅಂತ್ಯದ ವೇಳೆಗೆ ಅವರೆ ಫಸಲು ರೈತರ ಕೈಸೇರುವ ನಿರೀಕ್ಷೆ ಇದೆ. ಈ ನಾಟಿ ಸೊಗಡವರೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ದಕ್ಕಲಿದೆ ಎಂದು ಮೇಲಿನವಳಗೇರಹಳ್ಳಿ ರೈತ ಹರೀಶ್ ವಿಶ‍್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿ ತುರುವೇಕೆರೆಯಲ್ಲಿ ಉತ್ತಮ ಮಳೆಯಾದ್ದರಿಂದ ಸ್ಥಳೀಯ ಅವರೇಕಾಯಿಗೆ ಹೆಚ್ಚಿನ ಬೆಲೆ ಇತ್ತು. ಈ ಬಾರಿ ಇನ್ನೂ ಸ್ಥಳೀಯ ಅವರೆ ಕಾಯಿ ಮಾರುಕಟ್ಟೆಗೆ ಪೂರೈಕೆಯಾಗಿಲ್ಲ. ಹಾಗಾಗಿ ಪಟ್ಟಣಕ್ಕೆ ಪ್ರತಿ ದಿನ ಮೈಸೂರು, ಹುಣಸೂರು, ಮದ್ದೂರು, ದಾವಣಗೆರೆಗಳಿಂದ ಫಾರಂ ಅವರೆ ಕಾಯಿ ಬರುತ್ತಿದೆ. ಇವಕ್ಕೆ ಸೊಗಡೂ ಇಲ್ಲ, ಸರಿಯಾಗಿ ಕಾಳು ಬಲಿತೂ ಇಲ್ಲಾ. ಆದರೂ ಅವರೆಕಾಯಿ ಪ್ರಿಯರು ಕೆಜಿಗಟ್ಟಲೆ ಖರೀದಿಸುತ್ತಿದ್ದಾರೆ.

‘ಈ ಕಾಯಿಗೆ ಆರಂಭದಲ್ಲಿ ಕೆ.ಜಿ.ಗೆ ₹ 60 ಇತ್ತು. ಗುರುವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಅವರೆ ಕಾಯಿ ಮಾರುಕಟ್ಟೆಗೆ ಸರಬರಾಜಾಗುತ್ತಿದ್ದು, 2.5 ಕೆ.ಜಿ.ಗೆ ₹ 50ರಂತೆ ಬಿಕರಿಯಾಗುತ್ತಿದೆ. ಅವರೆ ಬೆಳೆ ಬೆಳೆದ ರೈತರಿಗೆ ಫಸಲಿಗೆ ತಕ್ಕ ಲಾಭ ಸಿಗುತ್ತಿಲ್ಲವಲ್ಲ ಎಂಬ ಕೊರಗು ಕಾಡಿದರೆ, ಇತ್ತ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿರುವುದು ಖುಷಿ ತಂದಿದೆ’ ಎನ್ನುತ್ತಾರೆ ಉಮಾ.

ಪಟ್ಟಣದ ಯಾವುದೇ ಅವರೆಕಾಯಿ ವ್ಯಾಪಾರಿ ಬಳಿ ಹೋದರೂ ಜನ ಕಿಕ್ಕಿರಿದು ಕೆ.ಜಿ.ಗಟ್ಟಲೆ ಅವರೆ ಕೊಳ್ಳಲು ದುಂಬಾಲು ಬೀಳುತ್ತಾರೆ. ಹೆಂಗಸರು ಕಾಯಿ ಜೊಳ್ಳಾಗಿವೆ, ಸೊಗಡಿಲ್ಲ, ಇನ್ನೂ ಕಡಿಮೆ ಮಾಡಿಕೊಳ್ಳಿ ಎಂದು ಚೌಕಾಸಿಯಲ್ಲಿ ತೊಡಗಿರುವುದು ಕಂಡು ಬಂದಿತು. ಇನ್ನು ಹೋಟೆಲ್, ಟಿಫನ್‍ ಸೆಂಟರ್ ಹಾಗೂ ಮಾಂಸಹಾರಿ ಹೋಟೆಲ್‍ಗಳಲ್ಲಿ ಅವರೆ ಕಾಯಿ ಪಲ್ಯದ್ದೇ ಕಾರುಬಾರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.