ಗುಬ್ಬಿ: ತಾಲ್ಲೂಕಿನ ಅಂಕಸಂದ್ರ ಸರ್ಕಾರಿ ಶಾಲೆಯಲ್ಲಿ ಶನಿವಾರ ಶ್ರವಣದೋಷವುಳ್ಳ ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಲಾಯಿತು.
ಶ್ರವಣ ದೋಷ ಮಕ್ಕಳನ್ನು ಇತರ ಮಕ್ಕಳೊಂದಿಗೆ ಬೆರೆಯುವಂತೆ ಮಾಡುವ ಜೊತೆಗೆ ಶಿಕ್ಷಕರು ನೀಡುವ ಸೂಚನೆ ಪಾಲಿಸುತ್ತ ಮಕ್ಕಳೇ ಖುದ್ದಾಗಿ ಬೋರ್ಡ್ ಮೇಲೆ ಬರೆಯುತ್ತಿದ್ದುದು ಪೋಷಕರು ಹಾಗೂ ಇತರ ಮಕ್ಕಳಲ್ಲಿ ಆಶ್ಚರ್ಯ ಉಂಟು ಮಾಡಿತು.
ಶ್ರವಣದೋಷವುಳ್ಳ ಶಾಲೆ ಶಿಕ್ಷಕ ಸಿದ್ದೇಶ್ ಬಿ.ಸಿ. ಮಾತನಾಡಿ, ಪೋಷಕರ ಅತಿಯಾದ ಆರೈಕೆ ಹಾಗೂ ಭಯದಿಂದಾಗಿ ಅನೇಕ ಶ್ರವಣದೋಷ ಮಕ್ಕಳು ಶಾಲೆಯಿಂದ ದೂರ ಉಳಿಯುವಂತಾಗುತ್ತಿರುವುದು ದುರಾದೃಷ್ಟಕರ. ಪೋಷಕರು ಯಾವುದೇ ಆತಂಕ ಇಟ್ಟುಕೊಳ್ಳದೆ ಶ್ರವಣ ದೋಷ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಅವರು ಎಲ್ಲರಂತೆ ಕಲಿತು ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುವುದು ಎಂದು ಹೇಳಿದರು.
ಶ್ರವಣ ದೋಷವುಳ್ಳ ಮಕ್ಕಳಿಗಾಗಿಯೇ ಸರ್ಕಾರ ಅನೇಕ ಸವಲತ್ತು ಒದಗಿಸುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಪೋಷಕರು ಮುಂದಾಗಬೇಕು. ಉತ್ತಮ ಶಿಕ್ಷಣ ದೊರೆತಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಕೃಷ್ಣಪ್ಪ ಮಾತನಾಡಿ, ಶ್ರವಣ ದೋಷವುಳ್ಳ ಮಕ್ಕಳಿಗೆ ಅಗತ್ಯ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಶಿಕ್ಷಣ ಕೊಡಿಸಿದಲ್ಲಿ ಸಾಮಾನ್ಯ ಮಕ್ಕಳಂತೆ ಜ್ಞಾನಾರ್ಜನೆ ಸಾಧ್ಯ ಎಂದರು.
ಇತ್ತೀಚಿನ ತಂತ್ರಜ್ಞಾನ ಉನ್ನತೀಕರಣ ಗೊಳ್ಳುತ್ತಿರುವುದರಿಂದ ಶ್ರವಣದೋಷವುಳ್ಳ ಮಕ್ಕಳು ಶಾಲೆಯಲ್ಲಿ ಕಲಿಯಲು ಅನುಕೂಲವಾಗುವಂತೆ ಪರಿಕರ ಲಭ್ಯವಾಗುತ್ತಿವೆ. ಶಿಕ್ಷಣ ಇಲ್ಲವಾದಲ್ಲಿ ಜೀವನಪೂರ್ತಿ ಮಕ್ಕಳು ಬೇರೆಯವರ ಮೇಲೆ ಅವಲಂಬನೆಯಾಗಬೇಕಾಗುತ್ತದೆ ಎನ್ನುವುದನ್ನು ಪೋಷಕರು ಅರಿತು ಮಕ್ಕಳ ಏಳಿಗೆಗೆ ಸಹಕರಿಸಬೇಕು ಎಂದರು.
ಸಿದ್ದರಾಮೇಶ್ವರ ಮೂಕ ಮತ್ತು ಶ್ರವಣದೋಷ ಶಾಲೆಯ ಮಕ್ಕಳು ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಎಲ್ಲರ ಮೆಚ್ಚುಗೆ ಪಡೆದರು.
ಅಂಕಸಂದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ರಮೇಶ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.