ADVERTISEMENT

ತನಿಖೆ ನಂತರ ರಾಹುಲ್ ಗಾಂಧಿ ಮೇಲಿನ ಆರೋಪ ಗೊತ್ತಾಗಲಿದೆ: ಬಿ.ಎಸ್‌.ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 7:24 IST
Last Updated 15 ಜೂನ್ 2022, 7:24 IST
ಶಾಸಕ ಬಿ.ಎಸ್‌.ಯಡಿಯೂರಪ್ಪ
ಶಾಸಕ ಬಿ.ಎಸ್‌.ಯಡಿಯೂರಪ್ಪ   

ತುಮಕೂರು: ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಯ ನಂತರ ಸತ್ಯಾಸತ್ಯತೆ ಹೊರ ಬರುತ್ತದೆ. ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ತಪ್ಪು ಮಾಡಿರದಿದ್ದರೆ ಆರೋಪ ಮುಕ್ತರಾಗಿ ಹೊರ ಬರುತ್ತಾರೆ. ಆರೋಪ ಸಾಬೀತಾದರೆ ಸಹಜವಾಗಿ ಶಿಕ್ಷೆಯಾಗುತ್ತದೆ ಎಂದು ಶಾಸಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಡಿ ಅಧಿಕಾರಿಗಳಿಗೆ ಅನುಮಾನ ಬಂದವರ ವಿರುದ್ಧ ತನಿಖೆ ಮಾಡುತ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಒಂದೇ. ರಾಹುಲ್ ಗಾಂಧಿ, ಯಡಿಯೂರಪ್ಪ ಬೇರೆ, ಬೇರೆ ಎಂಬ ಪ್ರಶ್ನೆಯೇ ಇಲ್ಲ. ತನಿಖೆ ನಡೆಯುತ್ತಿದೆ ಏನಾಗುತ್ತದೆ ಎಂಬುವುದನ್ನು ಕಾದು ನೋಡೋಣ’ ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ವೈ.ವಿಜಯೇಂದ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ ಎಂದು ತಿಳಿಸಿದರು.

ADVERTISEMENT

ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಆರಂಭ ಮಾಡಿದ್ದೇವೆ. ಎಲ್ಲಾ ವರ್ಗದ ಜನರನ್ನು ತಮ್ಮ‌ ಜೊತೆಗೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಅನೇಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಬರುವವರನ್ನು ಬೇಡ ಅಂತ ಹೇಳುವುದಿಲ್ಲ. ಪಕ್ಷ ಸೇರ್ಪಡೆಯಾಗುವವರಿಗೆ ಯಾವ ಸ್ಥಾನ ನೀಡಬೇಕು ಎನ್ನುವುದನ್ನು ಮುಖಂಡರು ತೀರ್ಮಾನ ಮಾಡುತ್ತಾರೆ. ಪಕ್ಷ ಬಲಪಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ಹೊಸದಾಗಿ ಲೋಕಾಯುಕ್ತರು ನೇಮಕವಾಗಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.