ತುಮಕೂರು: ಜಿಲ್ಲೆಯಲ್ಲಿ ಬಗರ್‌ಹುಕುಂ ಅರ್ಜಿ ವಿಲೇವಾರಿ ಕಾರ್ಯಕ್ಕೆ ಜಡತ್ವ ಹಿಡಿದಿದ್ದು, 52 ಸಾವಿರ ಅರ್ಜಿಗಳು ಗ್ರಾಮ ಆಡಳಿತಾಧಿಕಾರಿ ಲಾಗಿನ್‌ನಲ್ಲಿಯೇ ಬಾಕಿ ಉಳಿದುಕೊಂಡಿವೆ.
ಒಟ್ಟು 1,47,887 ಅರ್ಜಿಗಳು ಸಲ್ಲಿಕೆಯಾಗಿದ್ದು, 51,548 ಅರ್ಜಿಗಳು ತಿರಸ್ಕೃತಗೊಂಡಿವೆ. 52,299 ಅರ್ಜಿಗಳನ್ನು ಗ್ರಾಮ ಆಡಳಿತಾಧಿಕಾರಿಗಳು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಅರ್ಜಿ ಸಲ್ಲಿಕೆಯಾದ ನಂತರ ಆಡಳಿತಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಳ್ಳಬೇಕು. ಈ ಕೆಲಸ ಸಕಾಲಕ್ಕೆ ಆಗುತ್ತಿಲ್ಲ. ಇಂದಿಗೂ ಸಾವಿರಾರು ಅರ್ಜಿಗಳು ಗ್ರಾಮ ಆಡಳಿತಾಧಿಕಾರಿ ಲಾಗಿನ್‌ನಿಂದ ಮುಂದಕ್ಕೆ ಹೋಗಿಲ್ಲ.
ಗ್ರಾಮ ಆಡಳಿತಾಧಿಕಾರಿ ಮೂಲಕ ಕಂದಾಯ ಅಧಿಕಾರಿ, ಶಿರಸ್ತೇದಾರ್, ತಹಶೀಲ್ದಾರ್ ನಂತರ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಅರ್ಜಿ ವಿಲೇವಾರಿ ಕುರಿತು ಚರ್ಚೆಯಾಗುತ್ತದೆ. ಅರ್ಜಿ ಸಲ್ಲಿಕೆಯಾಗಿ ಮೂರು ವರ್ಷ ಕಳೆದರೂ ಇನ್ನೂ ಅರ್ಧ ಲಕ್ಷ ಅರ್ಜಿಗಳು ಆಡಳಿತಾಧಿಕಾರಿಗಳ ಬಳಿಯೇ ಇವೆ.
ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ನಮೂನೆ 50, 53, 57 ಅರ್ಜಿಗಳನ್ನು ಸಲ್ಲಿಸಲಾಗಿದೆ. 2022ರ ಜೂನ್ 30ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅರ್ಜಿ ಸಲ್ಲಿಕೆಯ ಅವಧಿ ಮುಗಿದು ಮೂರು ವರ್ಷ ಕಳೆದರೂ ವಿಲೇವಾರಿ ಮಾತ್ರ ಆಗುತ್ತಿಲ್ಲ. ಕಂದಾಯ ಅಧಿಕಾರಿ ಲಾಗಿನ್‌ನಲ್ಲಿ 352, ತಹಶೀಲ್ದಾರ್ ಬಳಿ 36, ಸಮಿತಿ ಮುಂದೆ 210 ಅರ್ಜಿಗಳು ವಿಲೇವಾರಿಗಾಗಿ ಕಾದಿವೆ. ಹತ್ತಾರು ವರ್ಷಗಳಿಂದ ಉಳಿಮೆ ಮಾಡುತ್ತಿರುವ ರೈತರು ಸಾಗುವಳಿ ಚೀಟಿಗಾಗಿ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ ಬಂದೊದಗಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅರ್ಜಿಗಳು 14,339 ಬಾಕಿ ಇವೆ. ತುರುವೇಕೆರೆ ಭಾಗದಲ್ಲಿ 5,606, ಕೊರಟಗೆರೆ ವ್ಯಾಪ್ತಿಯಲ್ಲಿ 5,142 ಅರ್ಜಿಗಳು ಗ್ರಾಮ ಆಡಳಿತಾಧಿಕಾರಿ ಲಾಗಿನ್‌ನಿಂದ ಮುಂದೆ ಸಾಗಿಲ್ಲ. ಅಧಿಕಾರಿ ವರ್ಗದ ನಿರ್ಲಕ್ಷ್ಯ ರೈತರನ್ನು ಸಂಕಷ್ಟಕ್ಕೆ ದೂಡಿದೆ.
‘ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರ ಸಭೆಗಳಲ್ಲಿ ‘ವೇಗವಾಗಿ ಕೆಲಸ ಮಾಡಲಾಗುವುದು. ಶೀಘ್ರದಲ್ಲಿಯೇ ಅರ್ಜಿ ವಿಲೇವಾರಿಗೆ ಕ್ರಮ ವಹಿಸಲಾಗುವುದು’ ಎಂದು ಹೇಳುವ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ನಂತರ ಇತ್ತ ಗಮನ ಹರಿಸುವುದೇ ಇಲ್ಲ. ಸಭೆಯ ನಂತರ ಜನಪ್ರತಿನಿಧಿಗಳಿಗೆ ಈ ವಿಷಯ ನೆನಪಿನಲ್ಲೇ ಉಳಿದಿರುವುದಿಲ್ಲ. ಮತ್ತೊಂದು ಸಭೆಯಲ್ಲಿಯೇ ಮತ್ತೆ ಈ ಬಗ್ಗೆ ಚರ್ಚೆಯಾಗುತ್ತದೆ.
ಅಧಿಕಾರಿಗಳು ‘ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು’ ಎಂದು ಸುಳ್ಳಿನ ಭರವಸೆ ನೀಡಿ ನಿರಾಳರಾಗುತ್ತಾರೆ ಎಂದು ಹುಳಿಯಾರಿನ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಇದುವರೆಗೆ ಒಟ್ಟು 51548 ಬಗರ್‌ಹುಕುಂ ಅರ್ಜಿಗಳು ತಿರಸ್ಕೃತಗೊಂಡಿದ್ದು ಮತ್ತೊಮ್ಮೆ ಈ ಎಲ್ಲ ಅರ್ಜಿಗಳ ಪರಿಶೀಲನೆ ಕಾರ್ಯ ಆರಂಭವಾಗಿದೆ. ಈ ಹಿಂದೆ ಶಾಸಕರ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಅರ್ಜಿ ವಿಲೇವಾರಿ ಹಕ್ಕುಪತ್ರ ವಿತರಣೆ ಕಾರ್ಯ ನಡೆಯುತ್ತಿತ್ತು. ಈಗ ಜಿಲ್ಲಾಧಿಕಾರಿಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದು ಸಾವಿರಾರು ಅರ್ಜಿಗಳು ಸಮಿತಿ ಗಮನಕ್ಕೆ ಬಾರದೆ ತಿರಸ್ಕೃತಗೊಂಡಿದ್ದವು. ‘ಅರ್ಹರ ಅರ್ಜಿಗಳನ್ನೂ ತಿರಸ್ಕರಿಸಲಾಗುತ್ತಿದೆ.
30 ವರ್ಷಗಳಿಂದ ಉಳಿಮೆ ಮಾಡುತ್ತಿರುವ ಭೂಮಿಗೆ ಸಾಗುವಳಿ ಚೀಟಿ ನೀಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಗೋಮಾಳ ಅರಣ್ಯ ಜಾಗ ಗುಂಡುತೋಪು ಎಂದು ಕಾರಣ ಹೇಳಿ ಅರ್ಜಿ ಸ್ವೀಕರಿಸುತ್ತಿಲ್ಲ’ ಎಂಬ ಆರೋಪ ಕೇಳಿ ಬಂದಿತ್ತು. ‘ಗ್ರಾಮಾಂತರ ಕ್ಷೇತ್ರದಲ್ಲಿ ನೂರಾರು ಅರ್ಜಿಗಳು ವಜಾಗೊಂಡಿವೆ. ಜನರಿಂದ ಆಯ್ಕೆಯಾದವರಿಂದ ಸರ್ಕಾರ ನಡೆಯುತ್ತಿದೆ. ಇಲ್ಲೇನು ಅಧಿಕಾರಿಗಳೇ ಸುಪ್ರೀಮಾ?’ ಎಂದು ಶಾಸಕ ಬಿ.ಸುರೇಶ್‌ಗೌಡ ಜಿಲ್ಲಾ ಪಂಚಾಯಿತಿಯಲ್ಲಿ ಈ ಹಿಂದೆ ನಡೆದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ಎಲ್ಲ ಬೇಡಿಕೆಗಳನ್ನು ಪರಿಗಣಿಸಿ ಮತ್ತೊಮ್ಮೆ ಅರ್ಜಿ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.