ADVERTISEMENT

ತುಮಕೂರು: ಗುಳೂರು ಕೆರೆಗೆ ಬೆಂಗಳೂರು ಕೊಳಚೆ ನೀರು

ಬೀದರ್– ತುಮಕೂರು– ಪಾಂಡವಪುರಕ್ಕೆ ರೈಲು ಮಾರ್ಗ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 2:21 IST
Last Updated 27 ಜನವರಿ 2021, 2:21 IST
ಸಚಿವ ಜೆ.ಸಿ.ಮಾಧುಸ್ವಾಮಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್, ಎಸ್‌ಪಿ ಕೆ.ವಂಶಿಕೃಷ್ಣ, ಶಾಸಕ ಜ್ಯೋತಿ ಗಣೇಶ್ ಪಾಲ್ಗೊಂಡಿದ್ದರು
ಸಚಿವ ಜೆ.ಸಿ.ಮಾಧುಸ್ವಾಮಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್, ಎಸ್‌ಪಿ ಕೆ.ವಂಶಿಕೃಷ್ಣ, ಶಾಸಕ ಜ್ಯೋತಿ ಗಣೇಶ್ ಪಾಲ್ಗೊಂಡಿದ್ದರು   

ತುಮಕೂರು: ಬೆಂಗಳೂರಿನ ಕೊಳಚೆ ನೀರು ಶುದ್ಧೀಕರಿಸಿ ತುಮಕೂರು ತಾಲ್ಲೂಕಿನ ಗೂಳೂರು ಭಾಗದ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಕಟಿಸಿದರು.

ನಗರದ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಜಿಲ್ಲೆಯ ಇತರೆಡೆ ವಿವಿಧ ಯೋಜನೆಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬೆಂಗಳೂರಿನ ಕೊಳಚೆ ನೀರು ಶುದ್ಧೀಕರಿಸಿಗೂಳೂರು ಭಾಗದ ಕೆರೆಗಳನ್ನು ತುಂಬಿಸಲಾಗುವುದು’ ಎಂದರು.

ಉತ್ತರ– ದಕ್ಷಿಣ ರೈಲು ಸಂಪರ್ಕ: ಬೀದರ್– ತುಮಕೂರು– ಪಾಂಡವಪುರದ ಮೂಲಕ ಮೈಸೂರಿಗೆ ರೈಲು ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಯೋಜನೆ ಕಾರ್ಯಗತವಾದರೆ ಉತ್ತರ– ದಕ್ಷಿಣದ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ. ರಾಯದುರ್ಗ– ತುಮಕೂರು, ದಾವಣಗೆರೆ– ತುಮಕೂರು ರೈಲು ಮಾರ್ಗಗಳನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

2ನೇ ಸ್ಥಾನ: ಬೆಂಗಳೂರು ಹೊರತುಪಡಿಸಿದರೆ ತುಮಕೂರು ಜಿಲ್ಲೆ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯಮ ಸ್ಥಾಪಿಸುವವರಿಗೆ ಹೆಚ್ಚಿನ ಸಬ್ಸಿಡಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ತೆಂಗಿನ ಉತ್ಪನ್ನಗಳನ್ನು ಬಳಸಿಕೊಂಡು ನಾರು ಆಧಾರಿತ ಉದ್ಯಮ ಆರಂಭಿಸಲು ಒತ್ತು ನೀಡುವಂತೆ ಕೇಂದ್ರ ಸರ್ಕಾರವನ್ನೂ ಕೇಳಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಉದ್ಯಮ ಕ್ಷೇತ್ರದಲ್ಲೂ ಪ್ರಗತಿಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಸಿದ ಅಂತರ್ಜಲ: ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 600 ಮಿ.ಮೀ ಮಳೆಯಾಗಬೇಕಿದ್ದು, ಈ ವರ್ಷ 800 ಮಿ.ಮೀ ಮಳೆಯಾಗಿದೆ. ಆದರೂ ಅಂತರ್ಜಲ ಮಟ್ಟದ 1,200 ಅಡಿಗಳಿಗೆ ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜಿಲ್ಲೆ ಮರುಭೂಮಿ ಆಗಲಿದೆ ಎಂದು ಎಚ್ಚರಿಸಿದರು. ಇಂತಹ ಅಪಾಯವನ್ನು ತಡೆಯುವ ಸಲುವಾಗಿ ವಿವಿಧ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದೆ. ಅಟಲ್ ಭೂಜಲ್ ಯೋಜನೆಯಲ್ಲಿ ಜಿಲ್ಲೆಯ 6 ತಾಲ್ಲೂಕುಗಳಲ್ಲಿಅಂತರ್ಜಲ ವೃದ್ಧಿಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಎಣ್ಣೆ ಕಾಳು ಬೆಳೆಯಿರಿ: ಪೆಟ್ರೋಲ್, ಡೀಸೆಲ್‌ ಬಿಟ್ಟರೆ ನಂತರ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಎಣ್ಣೆ ಕಾಳುಗಳನ್ನು ಬೆಳೆಯಲು ಹೆಚ್ಚಿನ ಅವಕಾಶಗಳಿದ್ದು, ರೈತರು ಈ ಕಡೆಗೂ ಗಮನ ಹರಿಸಬೇಕು. ಎಣ್ಣೆ ಆಮದು ಕಡಿಮೆಯಾದರೆ, ದೇಶಕ್ಕೆ ಹಣ ಉಳಿತಾಯವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.