ADVERTISEMENT

ತುಮಕೂರು | ಚೇತರಿಸಲಿಲ್ಲ ಮದ್ಯದ ಉದ್ಯಮ

ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ

ಡಿ.ಎಂ.ಕುರ್ಕೆ ಪ್ರಶಾಂತ
Published 24 ಆಗಸ್ಟ್ 2020, 20:00 IST
Last Updated 24 ಆಗಸ್ಟ್ 2020, 20:00 IST
ತುಮಕೂರಿನ ವೈಶಾಲಿ ಬಾರ್‌ ಮತ್ತು ರೆಸ್ಟೋರೆಂಟ್ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದೆ
ತುಮಕೂರಿನ ವೈಶಾಲಿ ಬಾರ್‌ ಮತ್ತು ರೆಸ್ಟೋರೆಂಟ್ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದೆ   

ತುಮಕೂರು: ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗೆ ಅವಕಾಶ ನೀಡಿದ್ದರೂ ವಹಿವಾಟು ಇಲ್ಲದೆ ಬಾರ್ ಮತ್ತು ರೆಸ್ಟೋರೆಂಟ್ ಉದ್ಯಮಕ್ಕೆ ತೀವ್ರವಾದ ಪೆಟ್ಟು ಬಿದ್ದಿದೆ.

ಸಾಮಾನ್ಯವಾಗಿ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕ್ಲೀನರ್, ಅಡುಗೆಯವರು ಹೀಗೆ ನಾನಾ ರೀತಿಯಲ್ಲಿ ಕನಿಷ್ಠ 50ಕ್ಕಿಂತ ಹೆಚ್ಚು ಮಂದಿ ಕೆಲಸದಲ್ಲಿ ತೊಡಗಿರುತ್ತಾರೆ. ಆದರೆ ಪಾರ್ಸೆಲ್‌ಗೆ ಅವಕಾಶ ನೀಡಿರುವುದು ಕೆಲಸಗಾರರ ಬದುಕನ್ನು ಅತಂತ್ರವಾಗಿಸಿದೆ. ಮಾಲೀಕರಿಗೂ 2020 ಆಘಾತವನ್ನು ನೀಡಿದ ವರ್ಷ ಎನಿಸಿದೆ. ಬಹುತೇಕ ಕಡೆಗಳಲ್ಲಿ ಕಾರ್ಮಿಕರು ಕೆಲಸ ಇಲ್ಲದೆ ಸ್ವಗ್ರಾಮಗಳಿಗೆ ಮರಳಿದ್ದಾರೆ.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸರ್ಕಾರ ಲಾಕ್‌ಡೌನ್‌ ಘೋಷಿಸಿತು. ಮದ್ಯದ ಅಂಗಡಿಗಳು ಬಂದ್ ಆದವು. ಮೇ ಮೊದಲ ವಾರದಿಂದ ಮದ್ಯದ ಅಂಗಡಿಗಳಲ್ಲಿ ಪಾರ್ಸೆಲ್‌ಗೆ ಮಾತ್ರವೇ ಅವಕಾಶ ನೀಡಲಾಯಿತು. ಆದರೆ, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ನಿರ್ಬಂಧ ಮುಂದುವರಿದಿದೆ. ಇದರಿಂದ ವಹಿವಾಟು ಚೇತರಿಕೆ ಕಂಡಿಲ್ಲ.

ADVERTISEMENT

ಜಿಲ್ಲಾ ಕೇಂದ್ರಗಳಲ್ಲಿ ನಾಲ್ಕೈದು ಬಾರ್‌ ಮತ್ತು ರೆಸ್ಟೋರೆಂಟ್‌ಗಳಿವೆ. ಜಿಲ್ಲೆಯಲ್ಲಿ ತಾಲ್ಲೂಕು ಮತ್ತು ಗ್ರಾಮೀಣ ಹೀಗೆ ಸಣ್ಣ ಪುಟ್ಟವೂ ಸೇರಿ 100ಕ್ಕೂ ಹೆಚ್ಚು ಬಾರ್, ರೆಸ್ಟೋರೆಂಟ್‌ಗಳಿವೆ. ಜಿಲ್ಲಾ ಕೇಂದ್ರದ ರೆಸ್ಟೋರೆಂಟ್‌ಗಳು ಪ್ರತಿ ವರ್ಷ ಸರ್ಕಾರಕ್ಕೆ ₹ 6.90 ಲಕ್ಷವನ್ನು ಪರವಾನಗಿ ಶುಲ್ಕ ಪಾವತಿಸಬೇಕು. ತಾಲ್ಲೂಕು ಕೇಂದ್ರಗಳ ರೆಸ್ಟೋರೆಂಟ್‌ಗಳೂ ಸಹ ನಿಗದಿತ ಶುಲ್ಕ ಪಾವತಿಸಬೇಕು. ಈ ಬಾರಿ ಸರ್ಕಾರ ಕೊರೊನಾ ಕಾರಣಕ್ಕೆ ಈ ಹಣವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿತು.

ಪಾರ್ಸೆಲ್‌ಗೆ ಅವಕಾಶ ನೀಡಿದ್ದರಿಂದ ಸಹಜವಾಗಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿರುವುದಿಲ್ಲ. ಆದ್ದರಿಂದ ಕೆಲವು ಕಡೆಗಳಲ್ಲಿ ಕಾರ್ಮಿಕರನ್ನು ಕಡಿತಗೊಳಿಸಲಾಗಿದೆ. ಈ ಕೆಲಸವನ್ನೇ ನಂಬಿಕೊಂಡಿದ್ದವರ ಬದುಕಿಗೆ ಪೆಟ್ಟು ಬಿದ್ದಿದೆ. ಉತ್ತರ ಭಾರತದ ಕಾರ್ಮಿಕರು ತಮ್ಮ ತವರುಗಳಿಗೆ ಮರಳಿದ್ದಾರೆ. ಅವರು ಬರುವುದು ಅನಿಶ್ಚಿತ. ರಾಜ್ಯದ ಕಾರ್ಮಿಕರಿಗೂ ಕೆಲಸ ಇಲ್ಲ ಎನ್ನುವಂತಾಗಿದೆ.

‘ಇಂದಲ್ಲಾ ನಾಳೆ ನಮ್ಮನ್ನು ಕರೆಯುತ್ತಾರೆ ಎನ್ನುವ ಆಸೆಯಲ್ಲಿ ಇದ್ದೇವೆ. ಯಾವಾಗ ಈ ಹಿಂದಿನ ರೀತಿಯಲ್ಲಿ ಕೆಲಸಗಳು ಆರಂಭವಾಗುತ್ತವೆಯೋ ನೋಡಬೇಕು’ ಎನ್ನುತ್ತಾರೆ ನಗರದ ಬಾರ್ ಮತ್ತು ರೆಸ್ಟೋರೆಂಟ್‌ವೊಂದರಲ್ಲಿ ಕೆಲಸ ಮಾಡುವ ನಾಗರಾಜ್. ಕೆಲವು ಕಡೆಗಳಲ್ಲಿ 10– 15 ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರು ಇದ್ದಾರೆ.

ಬಾಡಿಗೆ ಕಟ್ಟುವುದು ಹೇಗೆ?: ಸ್ವಂತ ಕಟ್ಟಡಗಳಲ್ಲಿ ವಹಿವಾಟು ನಡೆಸುತ್ತಿದ್ದವರಿಗೆ ಸ್ವಲ್ಪ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಆದರೆ ಬಾಡಿಗೆ ಕಟ್ಟಡಗಳಲ್ಲಿ ನಡೆಸುತ್ತಿದ್ದವರ ಪರಿಸ್ಥಿತಿ ಹೇಳತೀರದು ಎಂದು ಬಾರ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ತಿಳಿಸಿದರು.

ಲಕ್ಷಾಂತರ ರೂಪಾಯಿ ಬಾಡಿಗೆ, ವಿದ್ಯುತ್ ಬಿಲ್, ಕೆಲಸಗಾರರ ನಿರ್ವಹಣೆ, ಪರವಾನಗಿ ಶುಲ್ಕ... ಇದೆಲ್ಲವನ್ನೂ ವ್ಯಾಪಾರ ಇಲ್ಲದಿದ್ದರೂ ಪಾವತಿಸಿದ್ದೇವೆ. ಸಾಮಾನ್ಯ ಮದ್ಯದ ಅಂಗಡಿಗಳಿಗಿಂತ ನಮ್ಮಲ್ಲಿ ಹೆಚ್ಚು ದರ ಎನ್ನುವ ಗಾಳಿ ಸುದ್ದಿ ಜನರಲ್ಲಿ ಇದೆ. ಆದ ಕಾರಣ ಪಾರ್ಸಲ್‌ಗೆ ಬರುವವರೂ ಸಹ ಕಡಿಮೆ ಇದ್ದಾರೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.