ADVERTISEMENT

ಬಸವಣ್ಣ ಮೇಧಾವಿ ರಾಜಕಾರಣಿ

ಜಯದೇವ ವಿದ್ಯಾರ್ಥಿ ನಿಲಯದಲ್ಲಿ ಬಸವ ಮಂಟಪ ಆಯೋಜಿಸಿದ್ಧ ಬಸವ ಜಯಂತಿ ಕಾರ್ಯಕ್ರಮದಲ್ಲಿ ಟಿ.ಎಸ್.ನಿರಂಜನ್ ಅಭಿ‍ಪ್ರಾಯ

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:20 IST
Last Updated 12 ಮೇ 2019, 20:20 IST
ಟಿ.ಎಸ್.ನಿರಂಜನ್ ಮಾತನಾಡಿದರು.ಡಿ.ಎನ್.ಯೋಗೀಶ್, ಮಂಜುಳಾರಾಧ್ಯ, ಸಿದ್ಧಗಂಗಮ್ಮ, ಎಂ.ಜಿ.ಸಿದ್ದರಾಮಯ್ಯ ಇದ್ದರು
ಟಿ.ಎಸ್.ನಿರಂಜನ್ ಮಾತನಾಡಿದರು.ಡಿ.ಎನ್.ಯೋಗೀಶ್, ಮಂಜುಳಾರಾಧ್ಯ, ಸಿದ್ಧಗಂಗಮ್ಮ, ಎಂ.ಜಿ.ಸಿದ್ದರಾಮಯ್ಯ ಇದ್ದರು   

ತುಮಕೂರು: ಬಸವಣ್ಣ ಒಬ್ಬ ಶ್ರೇಷ್ಠ ರಾಜಕೀಯ ಮುತ್ಸದ್ದಿ. 12ನೇ ಶತಮಾನದಲ್ಲಿ ದೊರೆತ ರಾಜಕೀಯ ಶಕ್ತಿಯಿಂದ ಜಾತ್ಯಾತೀತ ತಳಹದಿಯ ಮೇಲೆ ಸಾಮಾಜಿಕ ನ್ಯಾಯ ನೀಡುವುದರ ಮೂಲಕ ಆಡಳಿತ ನೀತಿಯನ್ನು ಹೇಗೆ ಜಾರಿಗೆ ತರಬಹುದು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟ ಒಬ್ಬ ಮೇಧಾವಿ ರಾಜಕಾರಣಿ’ ಎಂದು ವಕೀಲ ಟಿ.ಎಸ್.ನಿರಂಜನ್ ಹೇಳಿದರು.

ನಗರದ ಜಯದೇವ ವಿದ್ಯಾರ್ಥಿ ನಿಲಯದ ಬಸವ ಮಂಟಪದಲ್ಲಿ ಬಸವ ಕೇಂದ್ರವು ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣನವರು ಅಂದು ಜಾರಿಗೊಳಿಸಿದ್ದ ಆಡಳಿತ ನೀತಿಗಳು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.

ADVERTISEMENT

ಕೇವಲ ಬಸವಣ್ಣನವರ ಹೆಸರನ್ನು ಹೇಳಿದರೆ ಸಾಲದು. ಅವರು ಹೇಳಿರುವ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದು ನಿಜವಾಗಿ ಸಲ್ಲುವ ಗೌರವವಾಗುತ್ತದೆ ಎಂದು ನುಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿ, ‘ ಬಸವಣ್ಣನವರ ವಚನಗಳು ಆತ್ಮಾವಲೋಕನದಿಂದ ಮೂಡಿಬಂದ ರಚನೆಗಳಾಗಿವೆ. ಅವು ವೈಚಾರಿಕ ನೆಲೆಯ ಹಿನ್ನೆಲೆಯುಳ್ಳವಾಗಿದ್ದು ಅವುಗಳಲ್ಲಿ ಬಸವಪ್ರಜ್ಞೆ ಅಡಗಿದೆ’ ಎಂದರು.

‘ಬಸವ ಪ್ರಜ್ಞೆಯ ಎರಡು ಮುಖ್ಯ ಅಂಶಗಳೆಂದರೆ ಕಾಯಕ ಮತ್ತು ದಾಸೋಹ. ಇವು ಒಂದೇ ನಾಣ್ಯದ ಎರಡು ಮುಖಗಳು. ಇವುಗಳನ್ನು ಸಮಾಜದಲ್ಲಿ ಜಾಗೃತಿಗೊಳಿಸುವುದರ ಮೂಲಕ ಬಸವ ಪ್ರಜ್ಞೆಯನ್ನು ಮೂಡಿಸಬಹುದು’ ಎಂದರು.

‘ಧಾರ್ಮಿಕವಾಗಿ ಶೋಷಣೆಗೆ ಒಳಗಾಗಿದ್ದ ಶೂದ್ರ ಸಮಾಜವನ್ನು ಮುಕ್ತಗೊಳಿಸಲು ಪ್ರಯತ್ನಿಸಿ ದೇಹವನ್ನೇ ದೇವಾಲಯವಾಗಿ ಪರಿವರ್ತಿಸಿದವರು ಬಸವಣ್ಣನವರು’ ಎಂದು ನುಡಿದರು.

ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷೆ ಮಂಜುಳಾರಾಧ್ಯ ಅವರನ್ನು ಸನ್ಮಾನಿಸಲಾಯಿತು. ಬಸವ ಕೇಂದ್ರದ ಅಧ್ಯಕ್ಷೆ ಸಿದ್ಧಗಂಗಮ್ಮ ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿದರು. ಈಶ್ವರಯ್ಯ ವಂದಿಸಿದರು. ಮಹಿಳಾ ಬಸವ ಕೇಂದ್ರದ ಕಾರ್ಯಕರ್ತೆಯರು ವಚನ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.