ADVERTISEMENT

ಭದ್ರಕೋಟೆ ಉಳಿಸಿಕೊಂಡ ಜೆಡಿಎಸ್; ಬಿಜೆಪಿ ಗೆಲುವಿಗೆ ಮುಳುವಾದ ಬಂಡಾಯ ಅಭ್ಯರ್ಥಿ

ಮಹಾನಗರ ಪಾಲಿಕೆ 22ನೇ ವಾರ್ಡ್ ಚುನಾವಣೆ

​ಪ್ರಜಾವಾಣಿ ವಾರ್ತೆ
Published 31 ಮೇ 2019, 12:24 IST
Last Updated 31 ಮೇ 2019, 12:24 IST
ತುಮಕೂರು ಮಹಾನಗರ ಪಾಲಿಕೆ 22ನೇ ವಾರ್ಡಿನ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೀನಿವಾಸಮೂರ್ತಿ ಅವರಿಗೆ ಮೈಸೂರು ಪೇಟಾ ತೊಡಿಸಿದ ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರು ಹೊತ್ತು ಸಂಭ್ರಮಿಸಿದರು
ತುಮಕೂರು ಮಹಾನಗರ ಪಾಲಿಕೆ 22ನೇ ವಾರ್ಡಿನ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೀನಿವಾಸಮೂರ್ತಿ ಅವರಿಗೆ ಮೈಸೂರು ಪೇಟಾ ತೊಡಿಸಿದ ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರು ಹೊತ್ತು ಸಂಭ್ರಮಿಸಿದರು   

ತುಮಕೂರು: ತೀವ್ರ ಕುತೂಹಲ ಕೆರಳಿಸಿದ್ದ ತುಮಕೂರು ಮಹಾನಗರ ಪಾಲಿಕೆಯ 22ನೇ ವಾರ್ಡಿನ ಉಪಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಸ್ಥಾನವನ್ನು ಉಳಿಸಿಕೊಂಡಿದೆ.

ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸಮೂರ್ತಿ ಅವರು ಸಮೀಪ ಸ್ಪರ್ಧಿ ಬಿಜೆಪಿಯ ಕೆ.ಸಂದೀಪ್ ಅವರಿಗಿಂತ 115 ಮತಗಳನ್ನು ಹೆಚ್ಚು ಪಡೆದು ಗೆಲುವು ಸಾಧಿಸಿದ್ದಾರೆ.

ಜೆಡಿಎಸ್‌ನ ಅಭ್ಯರ್ಥಿ ಶ್ರೀನಿವಾಸಮೂರ್ತಿ ಅವರಿಗೆ 916 ಮತಗಳು ಲಭಿಸಿದ್ದರೆ ಬಿಜೆಪಿಯ ಅಭ್ಯರ್ಥಿ ಕೆ.ಸಂದೀಪ್ ಅವರಿಗೆ 801 ಮತಗಳು ಬಂದಿವೆ.

ADVERTISEMENT

ಬಿಜೆಪಿ ಬಂಡಾಯ ಅಭ್ಯರ್ಥಿ ಎನ್ನಲಾದ ಪಕ್ಷೇತರ ಅಭ್ಯರ್ಥಿ ಬಿ.ಎಂ.ನರಸಿಂಹಮೂರ್ತಿ ಅವರು 670 ಮತಗಳನ್ನು ಪಡೆಯುವ ಮೂಲಕ ಗರಿಷ್ಠ ಮತ ಪಡೆದ ಮೂರನೇ ಅಭ್ಯರ್ಥಿಯಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಎಚ್.ಎಸ್. ರುದ್ರೇಶ್ 453 ಮತಗಳನ್ನು ಪಡೆದಿದ್ದಾರೆ. ಬಿಎಸ್ಪಿಯ ಕೆ.ಎಸ್.ರೇಣುಕಾಪ್ರಸಾದ್ ಅವರು ಕೇವಲ 113 ಮತಗಳನ್ನಷ್ಟೇ ಪಡೆದಿದ್ದಾರೆ.

ಪಕ್ಷೇತರ ಅಭ್ಯರ್ಥಿ ಪಿ.ವೀರಭದ್ರ 25, ಎಂ.ಎನ್.ರಾಘವೇಂದ್ರ 133 ಪಡೆದಿದ್ದಾರೆ. ನೋಟಾಗೆ 12 ಮತಗಳು ಬಿದ್ದಿವೆ!
ವಾರ್ಡ್‌ ಗೆಲುವಿಗೆ ಸರ್ಕಸ್ ಜೆಡಿಎಸ್‌ನಿಂದ ಈ ವಾರ್ಡಿನಲ್ಲಿ ಎರಡು ಬಾರಿ ಸ್ಪರ್ಧಿಸಿ ಗೆದ್ದಿದ್ದ ಮಾಜಿ ಮೇಯರ್ ಎಚ್.ರವಿಕುಮಾರ್ ಅವರ ಕೊಲೆಯಾದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಿತು.

22ನೇ ವಾರ್ಡ್ ಜೆಡಿಎಸ್ ಪ್ರಾಬಲ್ಯ ಇರುವ ವಾರ್ಡ್ ಆಗಿದ್ದು, ಈ ವಾರ್ಡ್ ಕೈ ತಪ್ಪಿ ಹೋಗದಂತೆ ಜೆಡಿಎಸ್ ಮುಖಂಡರು ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡಿ ಕಣಕ್ಕಿಳಿಸಿದ್ದರು.

ಈ ವಾರ್ಡಿನಲ್ಲಿ ಬಿಜೆಪಿಗೆ ತನ್ನದೇ ಆದ ಮತದಾರರಿದ್ದು, ಹಿಂದಿನ ಚುನಾವಣೆಗಳಲ್ಲಿ ಅಲ್ಪ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಶತಾಯಗತಾಯ ಈ ಬಾರಿ ವಾರ್ಡ್ ನಲ್ಲಿ ತನ್ನ ಅಭ್ಯರ್ಥಿ ಗೆಲ್ಲಿಸಲು ಬಿಜೆಪಿ ಮುಖಂಡರು ಪ್ರಯತ್ನಿಸಿದ್ದರು. ಆದಾಗ್ಯೂ ಅದು ಕೈಗೂಡಿಲ್ಲ. ಬಿಜೆಪಿ ಬಂಡಾಯ ಅಭ್ಯರ್ಥಿ ಎನ್ನಲಾದ ಪಕ್ಷೇತರ ಅಭ್ಯರ್ಥಿ ಬಿ.ಎಂ.ನರಸಿಂಹಮೂರ್ತಿ ಅವರು 670 ಮತಗಳನ್ನು ಪಡೆದಿದ್ದೇ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಅಂಕಿ ಅಂಶಗಳು

5298ಒಟ್ಟು ಮತದಾರರು
3023ಕ್ರಮಬದ್ಧ ಮತಗಳು
916 ಗೆದ್ದ ಅಭ್ಯರ್ಥಿ ಪಡೆದ ಒಟ್ಟು ಮತಗಳು
12ನೋಟಾ ಮತಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.