ADVERTISEMENT

ಭೀಮ್‌ ಆರ್ಮಿ: ಜಿಲ್ಲಾ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:45 IST
Last Updated 24 ಜುಲೈ 2019, 19:45 IST

ತುಮಕೂರು: ಭೀಮ್‌ ಆರ್ಮಿ ಸಂಘಟನೆಯ ತುಮಕೂರು ಜಿಲ್ಲಾ ಘಟಕಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷರಾಗಿ ವಾಲೆ ಚಂದ್ರಯ್ಯ, ಅಧ್ಯಕ್ಷರಾಗಿ ಎ.ಆರ್.ಶ್ರೀನಿವಾಸ ಮೂರ್ತಿ, ಉಪಾಧ್ಯಕ್ಷರಾಗಿ ಅಬ್ಬಾಸ್‌, ಶಿವಪ್ರಸಾದ್‌, ಲಾರೆನ್ಸ್‌, ಕಾರ್ಯದರ್ಶಿಯಾಗಿ ರವಿಕುಮಾರ್‌ ಮತ್ತು ಕಾನೂನು ಸಲಹೆಗಾರರಾಗಿ ರವಿಗೌಡ ಆಯ್ಕೆಯಾಗಿದ್ದಾರೆ.

ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಂಪತ್ ಸುಬ್ಬಯ್ಯ, ಭೀಮ್‌ ಆರ್ಮಿಯು ಐದು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಚಂದ್ರಶೇಖರ್‌ ಆಜಾದ್‌ ರಾವಣ್‌ ಅವರಿಂದ ಸ್ಥಾಪಿಸಲ್ಪಟ್ಟಿತು. ರಾಜ್ಯದ ಮೈಸೂರು, ಹಾಸನ, ಬೆಂಗಳೂರು ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಈಗ ತುಮಕೂರಿನಲ್ಲೂ ಬೆಳೆಯುತ್ತಿದೆ ಎಂದರು.

ADVERTISEMENT

ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಕಾರ್ಮಿಕರ ಹಕ್ಕುಬಾಧ್ಯತೆಗಳಿಗಾಗಿ ಸಂಘಟನೆ ಧ್ವನಿ ಎತ್ತಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಿದೆ. ದಮನಿತ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಲಿದೆ ಎಂದು ಅವರು ತಿಳಿಸಿದರು.

ತುಮಕೂರು ಘಟಕದಲ್ಲಿ ಈಗಾಗಲೇ 250 ಜನರು ಸಂಘಟನೆಯ ಸದಸ್ಯರಾಗಿದ್ದಾರೆ. ಪ್ರತಿ ಜಿಲ್ಲೆಯಲ್ಲಿ 10,000 ಸದಸ್ಯರನ್ನು ನೋಂದಾಯಿಸುವ ಗುರಿಯನ್ನು ಹೊಂದಿದ್ದೇವೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಇಚ್ಛೆ ಇರುವ ಎಲ್ಲರೂ ನಮ್ಮ ಆರ್ಮಿಯ ಸದಸ್ಯರು ಆಗಬಹುದು ಎಂದರು.

ಸಂಘಟನೆಯ ಸದಸ್ಯರಾದ ಪಿ.ಶಿವಾಜಿ, ಎಚ್‌.ಎನ್.ಮಂಜುನಾಥ್‌, ಈರೇಹಳ್ಳಿ ದೇವರಾಜ್‌, ರವಿಗೌಡ ಮತ್ತು ತಂಗನಹಳ್ಳಿ ಅನ್ನಪೂರ್ಣೇಶ್ವರಿ ಮಠದ ಬಸವ ಮಹಾಲಿಂಗ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.