ADVERTISEMENT

ತುಮಕೂರು | ಬಾರದ ಬಿಎಸ್‌ವೈ: ಕಾರ್ಯಕರ್ತರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:06 IST
Last Updated 19 ಮಾರ್ಚ್ 2023, 8:06 IST
ಗುಬ್ಬಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಮತ್ತು ಮುಖಂಡರು
ಗುಬ್ಬಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಮತ್ತು ಮುಖಂಡರು   

ಗುಬ್ಬಿ: ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ನಿರೀಕ್ಷೆಯಲ್ಲಿದ್ದ ಸಾವಿರಾರು ಕಾರ್ಯಕರ್ತರು ಅವರು ಬಾರದೆ ಇದ್ದ ಹಿನ್ನೆಲೆಯಲ್ಲಿ ನಿರಾಸೆಗೊಂಡರು.

ಪಟ್ಟಣದ ಸರ್ಕಾರಿ ಕಿರಿಯ ಕಾಲೇಜು ಮೈದಾನದಿಂದ ಪ್ರಾರಂಭಗೊಂಡ ರಥ ಯಾತ್ರೆಯಲ್ಲಿ ಸಂಸದರಾದ ಜಿ.ಎಸ್. ಬಸವರಾಜು, ಪಿ.ಸಿ. ಮೋಹನ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಕಾರ್ಯಕರ್ತರೊಡನೆ ಸಾಗಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಸಂಸದ ಬಸವರಾಜು ಮಾತನಾಡಿ, ತುಮಕೂರು ಜಿಲ್ಲೆಗೆ ಬಿಜೆಪಿ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡಿದೆ. ಬಿಜೆಪಿ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಪಥದತ್ತ ಸಾಗಿರುವ ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ಮತದಾರರು ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.

ADVERTISEMENT

ಸಂಸದ ಪಿ.ಸಿ. ಮೋಹನ್ ಮಾತನಾಡಿ, ಕಾಂಗ್ರೆಸ್ ಈಗಾಗಲೇ ಮುಳುಗಿರುವ ಹಡಗು. ಮತ್ತೆ ಅಧಿಕಾರದ ಕನಸನ್ನು ಕಾಣುತ್ತಿರುವುದು ವಿಪರ್ಯಾಸ. ಕೇಂದ್ರ ಸರ್ಕಾರದ ಆಹಾರ ಪಡಿತರವನ್ನು ಕಾಂಗ್ರೆಸ್ ಸರ್ಕಾರ ತನ್ನದೆಂದು ಹೇಳಿ ಸಾರ್ವಜನಿಕರನ್ನು ವಂಚಿಸಿದೆ ಎಂದು ಟೀಕಿಸಿದರು.

ಡಿ.ಕೆ. ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ವ್ಯವಸ್ಥಿತವಾಗಿ ವಿದ್ಯುತ್ ನೀಡದೆ ಈಗ ಉಚಿತವಾಗಿ ವಿದ್ಯುತ್ ನೀಡುತ್ತೇವೆ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ಛೇಡಿಸಿದರು.

ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಯಾವುದೇ ತಾರತಮ್ಯ ಮಾಡದೆ ಎಲ್ಲಾ ಸಮುದಾಯಗಳನ್ನು ಸಮಾನ ದೃಷ್ಟಿಯಿಂದ ಕಾಣುತ್ತಿರುವ ಬಿಜೆಪಿಯ ಜನಪ್ರಿಯತೆಯನ್ನು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಭೈರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಪಂಚಾಕ್ಷರಿ, ಮುಖಂಡರಾದ ಜಿ.ಎನ್. ಬೆಟ್ಟಸ್ವಾಮಿ, ಎಸ್‌.ಡಿ. ದಿಲೀಪ್ ಕುಮಾರ್, ಚಂದ್ರಶೇಖರ ಬಾಬು, ಮುಖಂಡರಾದ ನಂಜೇಗೌಡ, ಅ.ನಾ. ಲಿಂಗಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.