ADVERTISEMENT

ಪರಿವರ್ತನೆಯ ಅಸ್ತ್ರವನ್ನು ಕಡ್ಡಾಯವಾಗಿ ‍ಪ್ರಯೋಗಿಸಿ: ಯತೀಶ್ವರ ಶಿವಾಚಾರ್ಯ ಶ್ರೀ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 13:25 IST
Last Updated 16 ಏಪ್ರಿಲ್ 2019, 13:25 IST
ಯತೀಶ್ವರ ಶಿವಾಚಾರ್ಯ ಸ್ವಾಮೀಜಿ
ಯತೀಶ್ವರ ಶಿವಾಚಾರ್ಯ ಸ್ವಾಮೀಜಿ   

ತುಮಕೂರು: ಮತದಾನ ಸಮಾಜ ಬದಲಾವಣೆಯ ಮುಖ್ಯ ಅಸ್ತ್ರ. ಪಂಚಾಯಿತಿಯಿಂದ ಹಿಡಿದು ಲೋಕಸಭೆ ಚುನಾವಣೆಯ ತನಕ ಯಾರನ್ನು ಆಯ್ಕೆ ಮಾಡುತ್ತೇವೆ ಎನ್ನುವ ಪ್ರಜ್ಞೆ ನಾಗರಿಕರಿಗೆ ಮುಖ್ಯ. ನನ್ನೊಬ್ಬನ ಮತದಿಂದ ಏನಾಗುತ್ತದೆ ಎನ್ನುವ ಧೋರಣೆ ಬಿಟ್ಟು ಮತದಾನ ಮಾಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಲ್ಲರ ಹಕ್ಕು ಹಾಗೂ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವ ಕೀಲಿ ಕೈ ಎಂದು ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಕಡ್ಡಾಯ ಮತದಾನದ ಬಗ್ಗೆ ಕಿವಿ ಮಾತು ಹೇಳಿದ್ದಾರೆ.

ಮೂಲ ಸೌಕರ್ಯಗಳಾದ ಆಹಾರ, ನೀರು, ವಸತಿ, ಶಿಕ್ಷಣ, ಔಷಧಿ ಇತ್ಯಾದಿಗಳೆಲ್ಲವೂ ಸರ್ಕಾರದಿಂದಲೇ ನಡೆಯುತ್ತವೆ. ಆದ್ದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಇದೆ. ಯುವಜನರ ಮತದಾನವು ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪ್ರಜಾಪ್ರಭುತ್ವದ ವರದಾನ, ಸಂವಿಧಾನ ಸಂರಕ್ಷಣೆಯ ಸಾಧನವಾದ ಮತವನ್ನು ಸೂಕ್ತ ಹಾಗೂ ದಕ್ಷ ವ್ಯಕ್ತಿಗೆ ನೀಡಿ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಹೇಳಿದ್ದಾರೆ.

‘ಮತದಾನದಿಂದ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಂಡಂತೆ ಆಗುತ್ತದೆ. 18 ವರ್ಷ ತುಂಬಿದ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಭಾರತ ಸರ್ವಧರ್ಮ ಸಮನ್ವಯದ ದೇಶ. ವಿಭಿನ್ನತೆಯಲ್ಲಿ ಏಕತೆಯನ್ನು ಸಾರಿದೆ. ಅಧಿಕಾರದ ಗದ್ದುಗೆಯನ್ನು ಸಮರ್ಥ ವ್ಯಕ್ತಿಗೆ ನೀಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರದು. ಆಮಿಷಕ್ಕೆ, ಹಣಕ್ಕೆ ಮತವನ್ನು ಮಾರಿಕೊಳ್ಳಬಾರದು ಎಂದು ನುಡಿದಿದ್ದಾರೆ.

ADVERTISEMENT

ಜಾತಿ ಮತಗಳನ್ನು ಲೆಕ್ಕಿಸದೆ ಮತ ಹಾಕಿ. ಧರ್ಮ ವಿಭಜನೆ ಮಾಡುವವರಿಗೆ ಮತ ನೀಡಬೇಡಿ. ನಮ್ಮ ದೇಶ ರಕ್ಷಣೆ ಮಾಡುವವರಿಗೆ ನಮ್ಮ ಸಂಸ್ಕೃತಿ ಧರ್ಮ ಪರಂಪರೆಗಳನ್ನು ಉಳಿಸಿ ಬೆಳೆಸುವ ನಾಯಕರನ್ನು ಆಯ್ಕೆ ಮಾಡುವ ಹೊಣೆ ನಮ್ಮೆಲ್ಲರದು. ದೇಶದ ಹಿತಕ್ಕಾಗಿ ಮತದಾನದ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.