ತುಮಕೂರು: ಜಿಲ್ಲೆಯಲ್ಲಿ 40 ಸ್ಥಳಗಳನ್ನು ಅಪಘಾತ ವಲಯಗಳೆಂದು (ಬ್ಲಾಕ್ ಸ್ಪಾಟ್) ಗುರುತಿಸಿದ್ದು, ಈವರೆಗೂ ಅಪಘಾತ ತಡೆಗೆ ಎಂಜಿನಿಯರುಗಳು ಕ್ರಮ ಕೈಗೊಳ್ಳದಿರುವ ವಿಚಾರ ಶುಕ್ರವಾರ ನಡೆದ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಯಿತು.
ರಸ್ತೆ ಸುರಕ್ಷತೆ ಸಭೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ‘ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ 40 ಬ್ಲಾಕ್ ಸ್ಪಾಟ್ ಗುರುತಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಬ್ಲಾಕ್ ಸ್ಪಾಟ್‌ಗಳಲ್ಲಿ ಅಪಘಾತ ಸಂಭವಿಸಿದರೆ ಸಂಬಂಧಪಟ್ಟ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ನೇರ ಹೊಣೆಯಾಗಲಿದ್ದಾರೆ’ ಎಂದು ಎಚ್ಚರಿಸಿದರು.
ಗುರುತಿಸಿರುವ 40 ಬ್ಲಾಕ್ ಸ್ಪಾಟ್‌ಗಳ 100 ಮೀಟರ್ ಅಂತರದಲ್ಲಿ ಎಚ್ಚರಿಕೆ ನೀಡುವ ಫಲಕಗಳನ್ನು ಅಳವಡಿಸಬೇಕು. ಲೋಕೋಪಯೋಗಿ, ಪಂಚಾಯತ್ ರಾಜ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ಸುರಕ್ಷತೆಗೆ ಹೆಚ್ಚು ಗಮನ ಹರಿಸಬೇಕು. ರಸ್ತೆಗಳಲ್ಲಿ ಅನಗತ್ಯವಾಗಿ ಹಾಕಿರುವ ಸ್ಪೀಡ್ ಬ್ರೇಕರ್‌ಗಳನ್ನು ತೆರವುಗೊಳಿಸಬೇಕು. ಅಗತ್ಯ ಇರುವೆಡೆ ಮಾತ್ರ ಅಳವಡಿಸಬೇಕು ಎಂದು ತಿಳಿಸಿದರು.
ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದಾಗ ಆಂಬುಲೆನ್ಸ್, ಕ್ರೇನ್ ಸೇವೆಗಳು ತಕ್ಷಣ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 1033 ಸಹಾಯವಾಣಿ ಸಂಪರ್ಕಿಸಬಹುದು. ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ‘ಜಿಲ್ಲೆಯ 40 ಬ್ಲಾಕ್ ಸ್ಪಾಟ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಬೇಕು. ಅಗತ್ಯ ಬೆಳಕಿನ ವ್ಯವಸ್ಥೆ, ಮಾಹಿತಿ ನೀಡುವ ಪೇಂಟಿಂಗ್ ಮಾಡಿಸಬೇಕು. ರಸ್ತೆಯ ಮಧ್ಯದಲ್ಲಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಬೇಕು’ ಎಂದು ತಿಳಿಸಿದರು.
ಕಾನೂನು ಬಾಹಿರವಾಗಿ ನಿರ್ಮಿಸಿದ ಸ್ಪೀಡ್ ಬ್ರೇಕರ್, ಸೂಚನಾ ಫಲಕಗಳ ಕೊರತೆ ಹಾಗೂ ಇತರ ಕಾರಣಗಳಿಂದಾಗಿ ಅಪಘಾತ ಸಂಭವಿಸಿ ಪ್ರಾಣಹಾನಿಯಾದರೆ ಸಂಬಂಧಿಸಿದ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಸಾದ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಜಿ.ರಾಜು, ಪಂಚಾಯತ್ ರಾಜ್ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಹನುಮಂತಪ್ಪ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.