ತುಮಕೂರು: ಸರ್ಕಾರದಿಂದ ಮಕ್ಕಳಿಗೆ ವಿತರಿಸುವ ಪಠ್ಯ ಪುಸ್ತಕಗಳನ್ನು ಸಣ್ಣ ಮಳೆಯಾದರೂ ತೊಟ್ಟಿಕ್ಕುವ ಕಟ್ಟಡದಲ್ಲಿ ಸಂಗ್ರಹಿಸಿದ್ದು, ರಕ್ಷಣೆಯೇ ಸವಾಲಾಗಿದೆ. ಪುಸ್ತಕ ನೆನೆಯದಂತೆ ತಾಡಪಾಲು ಹೊದಿಸಲಾಗಿದೆ.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಹಳೆಯ ಕಚೇರಿ ಕಟ್ಟಡ ಬೀಳುವ ಹಂತದಲ್ಲಿದೆ. ಹಲವು ವರ್ಷಗಳಿಂದ ಇದೇ ಕಟ್ಟಡದಲ್ಲಿ ಪಠ್ಯಪುಸ್ತಕ ಸಂಗ್ರಹಿಸಲಾಗುತ್ತಿದೆ. ಜತೆಗೆ ಇಲಿ, ಹೆಗ್ಗಣಗಳ ಕಾಟವೂ ಹೆಚ್ಚಾಗಿದೆ. ಪುಸ್ತಕಗಳನ್ನು ಬೇರೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳದೇ ಇದ್ದರೆ ಉಪಯೋಗಕ್ಕೆ ಬಾರದಂತಾಗುತ್ತವೆ.
ಜಿಲ್ಲೆಯಲ್ಲಿ ತುಮಕೂರು ಅತಿ ದೊಡ್ಡ ತಾಲ್ಲೂಕು. ಇಲ್ಲಿಂದಲೇ ನೂರಾರು ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಸಲಾಗುತ್ತಿದೆ. ‘ಶೈಕ್ಷಣಿಕ ನಗರಿ’ ಎಂಬ ಹೆಸರೂ ಪಡೆದಿದೆ. ಆದರೆ ನಗರ ಕೇಂದ್ರದಲ್ಲಿಯೇ ಪುಸ್ತಕ ಸಂಗ್ರಹಕ್ಕೆ ಒಂದು ಜಾಗ ನಿಗದಿಪಡಿಸಿಲ್ಲ. ಯಾವ ಸಮಯದಲ್ಲಾದರೂ ಕುಸಿಯಬಹುದಾದ ಕಟ್ಟಡದಲ್ಲಿ ಪಠ್ಯ ಪುಸ್ತಕ ಇಟ್ಟಿದ್ದಾರೆ. ಸರಬರಾಜು ಮಾಡುವ ವೇಳೆ ಕಟ್ಟಡ ಕುಸಿದರೆ ಅನಾಹುತ ಸಂಭವಿಸಬಹುದು. ಆದರೆ ಅಧಿಕಾರಿಗಳು ಮಾತ್ರ ಎಚ್ಚರ ವಹಿಸಿಲ್ಲ.
‘ಪುಸ್ತಕಗಳನ್ನು ಹಳೆಯ ಕಟ್ಟಡದಲ್ಲಿ ಸಂಗ್ರಹಿಸುತ್ತಿಲ್ಲ. ಎಲ್ಲ ಶಾಲೆಗಳಿಗೆ ಕಳುಹಿಸಲಾಗಿದೆ. ಅಲ್ಲಿಂದಲೇ ಬೇರೆ ಕಡೆಗೆ ಸರಬರಾಜು ಮಾಡಲಾಗುತ್ತದೆ’ ಎಂಬುದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಪ್ರತಿಕ್ರಿಯೆ. ಆದರೆ ಇಂದಿಗೂ ನೂರಾರು ಪುಸ್ತಕಗಳು ಒಂದು ಜೋರಾದ ಮಳೆ ಸುರಿದರೆ ನೆನೆದು ಕೊಳೆಯುವ ಸ್ಥಿತಿಯಲ್ಲಿವೆ.
ದೂಳು ಹಿಡಿದ ಸಂಪನ್ಮೂಲ ಕೇಂದ್ರ: ಬಿಇಒ ಕಚೇರಿ ಸಮೀಪದಲ್ಲಿಯೇ ಇರುವ ‘ಕಲ್ಪತರು ಜಿಲ್ಲಾ ಕನ್ನಡ ಭಾಷಾ ಸಂಪನ್ಮೂಲ ಕೇಂದ್ರ’ ದೂಳು ಹಿಡಿದಿದೆ. ಶಾಲಾ ಶಿಕ್ಷಣ ಇಲಾಖೆ, ಡಯಟ್ ವತಿಯಿಂದ ಕೇಂದ್ರ ನಿರ್ಮಿಸಲಾಗಿದೆ. ಇದರ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ಹೊರಗೆ ಥಳುಕು, ಒಳಗೆ ಹುಳುಕು ಎಂಬಂತಿದೆ ಕೇಂದ್ರದ ಸ್ಥಿತಿ.
ಹೊರಗಡೆ ಸುಣ್ಣ, ಬಣ್ಣಗಳಿಂದ ಕಂಗೊಳಿಸುತ್ತಿದೆ. ಕಿಟಕಿಯಿಂದ ಸ್ವಲ್ಪ ಒಳಗಡೆ ಇಣುಕಿದರೆ ದೂಳು ಹಿಡಿದ ಬೆಂಚ್‌ಗಳು, ಮಾಸಿದ ಬೋರ್ಡ್ ಕಣ್ಣಿಗೆ ರಾಚುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿ, ಡಯಟ್ ಕಚೇರಿಯ ಅನತಿ ದೂರದಲ್ಲಿಯೇ ಇರುವ ಕೇಂದ್ರ ನಿರ್ವಹಣೆ ಇಲ್ಲದೆ ಅನಾಥವಾಗಿದೆ.
ಪುಸ್ತಕ ಸಂಗ್ರಹಿಸಿಲ್ಲ
ಹಳೆಯ ಕಟ್ಟಡದಲ್ಲಿ ಪುಸ್ತಕಗಳಿಲ್ಲ. ಕಟ್ಟಡ ಸೋರುತ್ತದೆ ಎಂದು ಗೊತ್ತಾದ ಮೇಲೆ ಆಯಾ ಶಾಲೆಗಳಿಗೆ ಸರಬರಾಜು ಮಾಡಲಾಗಿದೆ. ಸಂಪನ್ಮೂಲ ಕೇಂದ್ರವನ್ನು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು (ಬಿಆರ್‌ಸಿ) ಅಗತ್ಯ ಸಮಯದಲ್ಲಿ ಬಳಸುತ್ತಾರೆ. ಸಭೆ ಸಮಾರಂಭ ತರಬೇತಿ ನಡೆಸಲು ಕೇಂದ್ರ ಉಪಯೋಗಿಸುತ್ತಾರೆ. ಹನುಮಂತಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.