ADVERTISEMENT

ವಿವಾಹ ನೋಂದಣಿ ಪತ್ರಕ್ಕೆ ಲಂಚ: 4 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 14:00 IST
Last Updated 8 ಜೂನ್ 2019, 14:00 IST
   

ತುಮಕೂರು: ವಿವಾಹ ನೋಂದಣಿ ಮಾಡಿಸಿ ಅದರ ನೋಂದಣಿ ಪತ್ರ ನೀಡಲು ಅರ್ಜಿದಾರರಿಂದ ಲಂಚ ಪಡೆದಿದ್ದ ತುಮಕೂರು ಉಪನೋಂದಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶ್ರೀನಿವಾಸ್‌ಗೆ ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಾಲಯವು 4 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಪ್ರಕರಣ ಹಿನ್ನೆಲೆ: ಪ್ರವೀಣ್ ಮತ್ತು ಅರ್ಚನಾ ದಂಪತಿ ತಮ್ಮ ವಿವಾಹ ನೋಂದಣಿಗಾಗಿ 2014ರ ಮೇ ನಲ್ಲಿ ತುಮಕೂರಿನ ಉಪ ನೋಂದಣಾಧಿಕಾರಿ ಕಚೇರಿ ಸಂಪರ್ಕಿಸಿದ್ದರು. ಈ ಕಚೇರಿಯಲ್ಲಿ ವಿವಾಹ ನೋಂದಣಿಗಾಗಿಯೇ ಪ್ರತ್ಯೇಕ ಅಧಿಕಾರಿ ಇದ್ದಾರೆ. ಹೀಗಿದ್ದಾಗ್ಯೂ ಪ್ರಥಮ ದರ್ಜೆ ಸಹಾಯಕ ಶ್ರೀನಿವಾಸ್ ನೋಂದಣಿ ಮಾಡಿಸಿ ಪತ್ರ ನೀಡಲು ₹ 4 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ₹ 2,500ಕ್ಕೆ ಮಾಡಿಕೊಡಲು ಒಪ್ಪಿಕೊಂಡಿದ್ದರು.

ಆದರೆ, ಲಂಚ ನೀಡಲು ಇಷ್ಟವಿಲ್ಲದ ದಂಪತಿ ತುಮಕೂರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. 2014 ಮೇ 5ರಂದು ಶ್ರೀನಿವಾಸ್ ₹ 2,500 ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಸಿಪಿಐ ಗೌತಮ್ ಅವರು ಪ್ರಕರಣ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣ ಕುರಿತು ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಧೀಶರೂ ಆಗಿರುವ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ಕೋರ್ಟ್ ನ್ಯಾಯಾಧೀಶ ಎಸ್.ಸುಧೀಂದ್ರನಾಥ್ ಅವರು ಆರೋ‍ಪಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಲೋಕಾಯುಕ್ತ ವಿಶೇಷ ಅಭಿಯೋಜಕರಾದ ಎನ್.ಬಸವರಾಜು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.