ತುಮಕೂರು: ಮಹಾನಗರ ಪಾಲಿಕೆ ಆವರಣದಲ್ಲಿ ಏ. 14ರಂದು ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಬೌದ್ಧ ಭಿಕ್ಕುಗಳಿಗೆ ಆಹ್ವಾನ ನೀಡಲು ಜಿಲ್ಲಾ ಆಡಳಿತ ನಿರ್ಧರಿಸಿದೆ.
ಬೆಂಗಳೂರು, ತುಮಕೂರಿನ ಬೌದ್ಧ ಭಿಕ್ಕುಗಳನ್ನು ಆಹ್ವಾನಿಸಬೇಕು. ಅವರ ವಸತಿ, ಊಟೋಪಚಾರ, ವಾಹನ ವ್ಯವಸ್ಥೆಯನ್ನು ಜಿಲ್ಲಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ನಿರ್ದೇಶಿಸಿದ್ದಾರೆ.
ಕೋವಿಡ್, ಚುನಾವಣೆಯಿಂದಾಗಿ ನಾಲ್ಕು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿ ಪಾಲಿಕೆ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು. ಬಿಜಿಎಸ್ ವೃತ್ತದಿಂದ ಅಂಬೇಡ್ಕರ್, ಬಾಬು ಜಗಜೀವನ ರಾಂ ಭಾವಚಿತ್ರದ ಮೆರವಣಿಗೆ ಏರ್ಪಡಿಸಬೇಕು. ಎಲ್ಲಾ ತಾಲ್ಲೂಕಿನ ತಲಾ ಒಂದು ಕಲಾವಿದರ ತಂಡ, ರಾಜ್ಯ ಮಟ್ಟದ ಕಲಾವಿದರ ತಂಡ ಸೇರಿದಂತೆ ಒಟ್ಟು 20 ಕಲಾತಂಡಗಳು ಭಾಗವಹಿಸಬೇಕು. ಇದಕ್ಕೆ ವ್ಯವಸ್ಥೆ ಮಾಡುವಂತೆ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಎಂಪ್ರೆಸ್ ಕಾಲೇಜು, ಸೇಂಟ್ ಮೇರಿಸ್ ಕಾಲೇಜು, ಕೇಂದ್ರ ಗ್ರಂಥಾಲಯ ಆವರಣದಲ್ಲಿ ಊಟದ ವ್ಯವಸ್ಥೆ ಮಾಡುವಂತೆ ಆಹಾರ ಇಲಾಖೆಗೆ ತಿಳಿಸಿದರು.
ಜಿ.ಪಂ ಸಿಇಒ ಜಿ.ಪ್ರಭು, ನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್.ಕೃಷ್ಣಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.