ಮಧುಗಿರಿ: ಪುರಸಭೆ ವ್ಯಾಪ್ತಿಗೆ ತಾಲ್ಲೂಕಿನ ಕೆಲ ಗ್ರಾಮಗಳ ಸೇರ್ಪಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಭಾಗದ ಜನರ ಎರಡು ದಶಕಗಳ ಕನಸು ನನಸಾಗಿದೆ.
ಪುರಸಭೆ ವ್ಯಾಪ್ತಿಗೆ ಮಧುಗಿರಿ, ಹರಿಹರರೊಪ್ಪ ಮತ್ತು ಪಾಳ್ಯದ ಕೆಲಭಾಗಗಳು ಸೇರಿದಂತೆ ಒಟ್ಟು 12.14 ಚದರ ಕಿ.ಮೀ. ಪುರಸಭೆ ವ್ಯಾಪ್ತಿ ಸೇರ್ಪಡೆಗೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಗ್ರಾಮಗಳ ಸೇರ್ಪಡೆಯಿಂದ ಮಧುಗಿರಿ ಪಟ್ಟಣ ಮತ್ತಷ್ಟು ವೇಗವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಸೇರ್ಪಡೆಗೊಂಡ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಹಿಂದೆ ಹರಿಹರರೊಪ್ಪ ಹಾಗೂ ಪಾಳ್ಯದ ಕೆಲವು ಸರ್ವೆ ನಂಬರ್‌ಗಳು ಪುರಸಭೆ ವ್ಯಾಪ್ತಿಯಿಂದ ಕೈಬಿಟ್ಟು ಹೋಗಿದ್ದವು. ಈಗ ಪುರಸಭೆಗೆ ಸೇರ್ಪೆಡೆಯಾಗಿರುವ ಹೊಸ ಹೊಸ ಬಡಾವಣೆಗಳನ್ನು ನಿರ್ಮಿಸಲು ಸಹಕಾರಿಯಾಗುತ್ತದೆ.
ಪುರಸಭೆ ವ್ಯಾಪ್ತಿಗೆ ಒಂದಿಷ್ಟು ಗ್ರಾಮಗಳನ್ನು ಸೇರಿಸಿಕೊಂಡು ಪುರಸಭೆಯ ವ್ಯಾಪ್ತಿ ಹೆಚ್ಚಿಸಬೇಕು ಎಂಬ ಜನರ ಒತ್ತಾಯದಂತೆ 2001ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆ ನನೆಗುದಿಗೆ ಬಿದ್ದಿತ್ತು. ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.
ಮಧುಗಿರಿ ಪುರಸಭೆಯ ಗಡಿ ವಿಸ್ತರಣೆ ಮಾಡಿರುವುದರಿಂದ ಕೃಷಿ ಚಟುವಟಿಕೆಯಲ್ಲಿದ್ದ ಜಮೀನುಗಳು ಕೃಷಿಯೇತರ ಚಟುವಟಿಕೆಗಳಿಗೆ ಬದಲಾಗಿ ನಿವೇಶನದ ಬಡಾವಣೆ ಹಾಗೂ ಕೈಗಾರಿಕಾ ವಲಯಗಳು ಪ್ರಾರಂಭವಾದಾಗ ಉದ್ಯೋಗ ಮತ್ತು ಮನೆಗಳ ನಿರ್ಮಾಣವಾಗಿ ಮಧುಗಿರಿ ಪಟ್ಟಣ ಅಭಿವೃದ್ಧಿಯಾಗುತ್ತದೆ.
ಸದ್ಯ ಪಟ್ಟಣದಲ್ಲಿ ನಿವೇಶನ ದರ ದುಬಾರಿ ಇದೆ. ಪುರಸಭೆ ವ್ಯಾಪ್ತಿ ಹಿಗ್ಗಿ ಹೊಸ ಬಡಾವಣೆಗಳು ನಿರ್ಮಾಣವಾದರೆ ನಿವೇಶನದ ದರ ಕಡಿಮೆಯಾಗುತ್ತದೆ. ಬಡ ಜನರೂ ನಿವೇಶನವನ್ನು ಖರೀದಿಸಿ ಮನೆ ನಿರ್ಮಾಣ ಮಾಡಿಕೊಂಡು ಕನಸು ನನಸಾಗಿಕೊಳ್ಳಬಹುದು ಎಂದು ಆಶಾಭಾವನೆ ಮೂಡಿದೆ.
ನಿವೇಶನಗಳ ನೋಂದಣಿಯಿಂದಲೇ ಪುರಸಭೆಗೆ ಹೆಚ್ಚಿನ ಆದಾಯ ಬರುತ್ತದೆ. ಇದಲ್ಲದೆ ಹತ್ತಾರು ಕೈಗಾರಿಕೆಗಳಿಂದಲೂ ಉತ್ತಮ ತೆರಿಗೆ ಸಂಗ್ರಹವಾಗುತ್ತದೆ. ಇದನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎನ್ನುವುದು ಜನರ ಒತ್ತಾಯ.
ಈ ಹಿಂದೆಯೇ ಭೂ ಪರಿವರ್ತನೆಯಾದ ನಂತರ ನಗರ ಮತ್ತು ಯೋಜನಾ ಪ್ರಾಧಿಕಾರದಿಂದ ನಕ್ಷೆ ಮತ್ತು ವಿನ್ಯಾಸವನ್ನು ಅನುಮೋದನೆ ಮಾಡಿದ ಬಡಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಸಕ್ಷಮ ಪ್ರಾಧಿಕಾರಗಳಿಂದ ನಿರಕ್ಷೇಪಣಾ ಪ್ರಮಾಣ ಪತ್ರಗಳನ್ನು ಪಡೆದು ಪುರಸಭೆಯಿಂದ ಖಾತೆ ಬಿಡುಗಡೆ ಮಾಡಿ ಜನರಿಗೆ ನಿವೇಶನಗಳನ್ನು ಮಾರಾಟ ಮಾಡಿದ್ದರೆ ಜನರಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ ಎಂದು ಲಿಂಗೇನಹಳ್ಳಿಯ ವೆಂಕಟೇಶ್ ಹೇಳಿದರು.
ಹರಿಹರರೊಪ್ಪ ಮತ್ತು ಪಾಳ್ಯದಳ್ಳಿಯ ಕೆಲವು ಸರ್ವೆ ನಂಬರ್‌ಗಳು ಪುರಸಭೆ ವ್ಯಾಪ್ತಿಯಿಂದ ಕೈಬಿಟ್ಟಿದ್ದವು. ಅವುಗಳನ್ನು ಈಗ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಸಚಿವ ಸಂಪುಟದಲ್ಲಿ ಅನುಮೋದನೆ ದೊರತಿದೆ. ಪಟ್ಟಣದ ಅಭಿವೃದ್ಧಿಗೆ ಮತ್ತಷ್ಟು ಯೋಜನೆ ರೂಪಿಸಲಾಗುವುದುಕೆ.ಎನ್.ರಾಜಣ್ಣ ಸಹಕಾರ ಸಚಿವ
ಹಲವು ವರ್ಷಗಳಿಂದ ಈ ಪ್ರಸ್ತಾವನೆ ನನೆಗುದಿಗೆ ಬಿದ್ದಿತ್ತು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಸಹಕಾರದಿಂದ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಇದರಿಂದ ಮಧುಗಿರಿ ಪಟ್ಟಣ ಬೆಳೆಯಲು ಸಹಕಾರಿಯಾಗಿದೆಜಿ.ಮಂಜುನಾಥ್ ಪುರಸಭೆ ಅಧ್ಯಕ್ಷ
ಮಧುಗಿಯಲ್ಲಿ ನೂತನವಾಗಿ ಬಡಾವಣೆಗಳು ನಿರ್ಮಾಣವಾದರೆ ಮನೆಗಳನ್ನು ನಿರ್ಮಿಸಿಕೊಳ್ಳಲು ಬಡವರ ಮತ್ತು ಮಧ್ಯಮ ವರ್ಗದ ಜನರಿಗೂ ಅನುಕೂಲವಾಗುತ್ತದೆ.ಎಂ.ವಿ.ಬಾಲಾಜಿ ಬಾಬು ಮಧುಗಿರಿ
ಹರಿಹರರೊಪ್ಪ ಭಾಗಶಃ ಕಂದಾಯ ಗ್ರಾಮವನ್ನು ಮಧುಗಿರಿ ಪುರಸಭೆಗೆ ಸೇರ್ಪಡೆ ಮಾಡಿರುವುದು ಸ್ವಾಗತಾರ್ಹ. ಪಟ್ಟಣದ ರೀತಿಯಲ್ಲೇ ಈ ಭಾಗಕ್ಕೂ ಮೂಲ ಸೌಕರ್ಯಗಳನ್ನು ಒದಗಿಸಬೇಕುರಂಗಪ್ಪ ಹರಿಹರರೊಪ್ಪ
ಈ ಹಿಂದೆ ಹರಿಹರರೊಪ್ಪ ಹಾಗೂ ಪಾಳ್ಯದಳ್ಳಿಯ ಕೆಲವು ಸರ್ವೆ ನಂಬರ್‌ಗಳು ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದವು. ಈ ಬಗ್ಗೆ ಗ್ರಾಮದಲ್ಲಿ ಅಸಮಾಧಾನವಿತ್ತು. ಆದರೆ ಈಗ ಗ್ರಾಮ ಸೇರ್ಪಡೆಯಿಂದ ಸಂತಸ ತಂದಿದೆಗಂಗರಾಜು ಸ್ಥಳೀಯ
ಟೂಡ ಬಡಾವಣೆಗಳು ನಿರ್ಮಾಣವಾದರೆ ಬ್ಯಾಂಕ್‌ನಿಂದ ಸಾಲ ಪಡೆದು ಮನೆಯನ್ನು ನಿರ್ಮಿಸಿಕೊಳ್ಳಲು ಸಹಕಾರಿಯಾಗುತ್ತದೆಉಗ್ರಪ್ಪ ಹರಿಹರರೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.