ADVERTISEMENT

ಕಾಲುಬಾಯಿ ಜ್ವರ: ಹೆಚ್ಚಿದ ರಾಸು ಸಾವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 2:24 IST
Last Updated 7 ಜೂನ್ 2021, 2:24 IST
ಅಶೋಕ್
ಅಶೋಕ್   

ತುಮಕೂರು: ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದ್ದು, ಎಲ್ಲೆಡೆ ಹಸಿರು ಚಿಗುರು ಮೂಡಿದೆ. ಜಾನುವಾರುಗಳು ಹಸಿರು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಇಳೆ ತಂಪಾಗುವ ಹೊತ್ತಿಗೆ ಜಾನುವಾರುಗಳಿಗೆ ರೋಗವೂ ಹಿಂಬಾಲಿಸಿದ್ದು, ಜಿಲ್ಲೆಯಲ್ಲಿ ಲಸಿಕೆ ಸಿಗದಾಗಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಮಳೆಗಾಲದಲ್ಲಿ ಜಾನುವಾರುಗಳಿಗೆ ಕಾಡುವ ರೋಗ ಹಾಗೂ ಸಾವು ನೋವು ತಪ್ಪಿಸುವ ಸಲುವಾಗಿ ಪ್ರತಿ ವರ್ಷವೂ ಲಸಿಕೆ ಹಾಕಲಾಗುತ್ತದೆ. ಆದರೆ ಜಿಲ್ಲೆಗೆ ಲಸಿಕೆಯೇ ಬಂದಿಲ್ಲ. ಯಾವಾಗ ಲಸಿಕೆಹಾಕುತ್ತಾರೋ ಎಂದು ಜಾನುವಾರು ಸಾಕಿರುವವರು ಎದುರು ನೋಡುತ್ತಿದ್ದಾರೆ.

ದನ, ಎಮ್ಮೆ, ಇತರ ರಾಸುಗಳಿಗೆ ಮಳೆಗಾಲ ಅಡಿಇಡುತ್ತಿದ್ದಂತೆಯೇ ಕಾಲು ಬಾಯಿ ಜ್ವರ ಕಾಣಿಸಿಕೊಳ್ಳುತ್ತದೆ. ಕುರಿ, ಮೇಕೆಗಳಿಗೆ ಕರಳು ಬೇನೆ ರೋಗ ಕಾಡುತ್ತದೆ. ಈ ರೋಗದಿಂದ ಜಾನುವಾರು ರಕ್ಷಿಸುವ ಸಲುವಾಗಿ ಏಪ್ರಿಲ್ ನಂತರ ಪಶುಸಂಗೋಪನಾ ಇಲಾಖೆ ಮೂಲಕ ಲಸಿಕೆ ಹಾಕಲಾಗುತ್ತದೆ. ಆದರೆ ಈ ಸಲ ಈವರೆಗೂ ಲಸಿಕೆ ಅಭಿಯಾನ ಆರಂಭಿಸಿಲ್ಲ. ಈಗಾಗಲೇ ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ರೋಗ ಉಲ್ಬಣಿಸಿದ್ದು, ಜಾನುವಾರುಗಳನ್ನು ರೋಗದಿಂದ ಪಾರುಮಾಡಲು ರೈತರು ಪರದಾಡುತ್ತಿದ್ದಾರೆ.

ADVERTISEMENT

ಕಳೆದ ಎರಡು–ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕಾಲು ಬಾಯಿ ಜ್ವರ ಉಲ್ಬಣಿಸಿದ ಸಮಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಾನುವಾರುಗಳು ಸಾವನ್ನಪ್ಪಿದ್ದವು. ಅಂದಿನಿಂದ ತಪ್ಪದೆ ಆರು ತಿಂಗಳಿಗೆ ಒಮ್ಮೆ,ವರ್ಷದಲ್ಲಿ ಎರಡು ಬಾರಿ ಲಸಿಕೆ ಹಾಕಲಾಗುತಿತ್ತು. ಈ ಬಾರಿ ಕೋವಿಡ್ ಲಾಕ್‌ಡೌನ್‌ನಿಂದ ಲಸಿಕೆ ಹಾಕುವುದು ಮುಂದಕ್ಕೆ ಹೋಗಿದೆ. ಏಪ್ರಿಲ್‌ ತಿಂಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಪ್ರಾರಂಭಿಸಬೇಕಿತ್ತು. ಆದರೆ ಈವರೆಗೂ ಜಿಲ್ಲೆಗೆ ಲಸಿಕೆಯೇ ಬಂದಿಲ್ಲ.

ದೊಡ್ಡ ನಷ್ಟ: ಗ್ರಾಮೀಣ ಪ್ರದೇಶಗಳಲ್ಲಿ ಈಗ ಹೈನುಗಾರಿಕೆಯನ್ನೇ ನಂಬಿ ಸಾಕಷ್ಟು ಜನರು ಬದುಕು ಕಟ್ಟಿಕೊಂಡಿದ್ದಾರೆ. ಜಿಲ್ಲೆಯೊಂದಲ್ಲೇ ತುಮುಲ್‌ಗೆ ಸುಮಾರು 8 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹೊರಗಿನ ಬಳಕೆಯನ್ನು ಲೆಕ್ಕ ಹಾಕಿದರೆ ಈ ಪ್ರಮಾಣ 10 ಲಕ್ಷ ಲೀಟರ್ ದಾಟಬಹುದು. ರೈತರು ಲಕ್ಷಾಂತರ ಸಂಖ್ಯೆಯ ಸೀಮೆ ಹಸುಗಳನ್ನು ಸಾಕಿದ್ದಾರೆ. ಕೆಲವು ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತವೆ. ಇಂತಹ ಹಸುಗಳು ಸಾವನ್ನಪ್ಪಿದ್ದರೆ ಇದನ್ನೇ ನಂಬಿ ಜೀವನ ಸಾಗಿಸುವವರು, ಸಾಲಮಾಡಿ ಹಸು ಕೊಂಡವರ ಬದುಕು ಬೀದಿಗೆ ಬರುತ್ತದೆ. ಒಂದು ಕಡೆ ಸಾಲ ತೀರಿಸಲಾಗದೆ, ಮತ್ತೊಂದೆಡೆ ಜೀವನ ನಡೆಸಲಾಗದೆ ಬದುಕು ದುರ್ಬರವಾಗಿಸುತ್ತದೆ.

ಲಸಿಕೆ ನಡುವೆ ಹೆಚ್ಚು ಅಂತರ: ಕಳೆದ ವರ್ಷ ಕೋವಿಡ್ ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌ನಲ್ಲಿ ಲಸಿಕೆ ಹಾಕಿಲ್ಲ. ನಂತರ ಅಕ್ಟೋಬರ್‌ನಲ್ಲಿ ಲಸಿಕೆ ಹಾಕಲಾಯಿತು. ಒಮ್ಮೆ ಲಸಿಕೆ ಹಾಕಿದ ಆರು ತಿಂಗಳ ನಂತರ ಮತ್ತೆ ಲಸಿಕೆ ಹಾಕಿದರೆ ಕಾಲು ಬಾಯಿ ಜ್ವರ ಬರದಂತೆ ತಡೆಯಬಹುದು. ಈಗಾಗಲೇ ಲಸಿಕೆ ಹಾಕಿ ಏಳು ತಿಂಗಳು ಕಳೆದಿದ್ದು, ರೋಗ ಉಲ್ಬಣಿಸುತ್ತಿದೆ. ಎರಡು ವರ್ಷದಲ್ಲಿ ನಾಲ್ಕು ಬಾರಿ ಲಸಿಕೆ ಹಾಕಬೇಕಿದ್ದು, ಒಮ್ಮೆ ಮಾತ್ರ ಹಾಕಲಾಗಿದೆ. ಹಾಗಾಗಿ ರೋಗ ಎಲ್ಲೆಡೆ ವೇಗವಾಗಿ ಹರಡುತ್ತಿದೆ.

ಕುಣಿಗಲ್, ತುರುವೇಕೆರೆ, ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ, ಮಧುಗಿರಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಜಾನುವಾರುಗಳು ರೋಗದಿಂದ ಬಳಲುತ್ತಿದ್ದು, ಸಾವನ್ನಪ್ಪಿವೆ. ಕುಣಿಗಲ್‌ ತಾಲ್ಲೂಕಿನ ಪುಟ್ಟನಪಾಳ್ಯ, ಹೊಡಘಟ್ಟಾ, ಲಿಂಗದೇವರಹಳ್ಳಿ, ಕಲ್ಲಯ್ಯನಪಾಳ್ಯ, ಗಿರಿಗೌಡನಪಾಳ್ಯ, ಬೋರಸಂದ್ರ, ದಾಸನಪುರ, ಯಾಚಘಟ್ಟ, ಉರ್ಕೇಹಳ್ಳಿಪಾಳ್ಯ ಗ್ರಾಮಗಳಲ್ಲಿ ರೋಗ ಉಲ್ಬಣಿಸಿದೆ.

ಲಸಿಕೆ ಬರುವುದು ಹಾಕುವುದು ಯಾವಾಗ, ಜಾನುವಾರುಗಳ ಜೀವ ಉಳಿಸುವುದು ಯಾವಾಗ ಎಂದು ಕುಣಿಗಲ್ ತಾಲ್ಲೂಕು ಗಿರಿಗೌಡನಪಾಳ್ಯದ ರೈತ ರಾಮೇಗೌಡ ಪ್ರಶ್ನಿಸುತ್ತಾರೆ.

ಜಾನುವಾರು ಸಾವು: ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ತಿಮ್ಮೇಗೌಡನಪಾಳ್ಯದಲ್ಲಿ 4 ಕರುಗಳು ಕಾಲುಬಾಯಿ ಜ್ವರದಿಂದ ಮೃತಪಟ್ಟಿರುವುದು ವರದಿಯಾಗಿದೆ. ಬೇರೆಡೆ ರಾಸುಗಳು ಮೃತಪಟ್ಟ ಬಗ್ಗೆ ಇನ್ನೂ ವರದಿ ಬರಬೇಕಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ (ಪ್ರಭಾರ) ಡಾ.ದಿವಾಕರ್ ತಿಳಿಸಿದರು.

ತಿಮ್ಮೇಗೌಡನಪಾಳ್ಯದಲ್ಲಿ ಮೃತಪಟ್ಟ ರಾಸುಗಳ ಮಾದರಿಯನ್ನು ಶಿರಾ ಸಮೀಪ ಇರುವ ಪಶುರೋಗ ತನಿಖಾ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಕಾಲುಬಾಯಿ ಜ್ವರದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.