ತುಮಕೂರು: ಮುಂದಿನ ದಿನಗಳಲ್ಲಿ ನಡೆಯುವ ಜಾತಿ ಜನಗಣತಿ ಸಂದರ್ಭದಲ್ಲಿ ಯಾವುದೇ ಉಪ ಜಾತಿಯನ್ನು ನಮೂದಿಸದೆ ಈಡಿಗ ಎಂದು ದಾಖಲಿಸುವಂತೆ ಜೆ.ಪಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜೆ.ಪಿ.ಸುಧಾಕರ್ ಸಲಹೆ ಮಾಡಿದರು.
ನಗರದ ಜಿಲ್ಲಾ ಆರ್ಯ ಈಡಿಗರ ಸಂಘದಲ್ಲಿ ಈಚೆಗೆ ಏರ್ಪಡಿಸಿದ್ದ ಜಿಲ್ಲಾ ಆರ್ಯ ಈಡಿಗರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, ‘ಯಾವುದೇ ಉಪನಾಮ ಇದ್ದರು, ಈಡಿಗ ಎಂದು ಬರೆಸಬೇಕು’ ಎಂದರು.
ಸಮಾಜದ ಪ್ರತಿಯೊಬ್ಬರೂ ಸಂಘದ ಅಭಿವೃದ್ಧಿ ಚಟುವಟಿಕೆಗಳಿಗೆ ಸ್ಪಂದಿಸಿ, ಪ್ರೋತ್ಸಾಹಿಸಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಎಲ್ಲ ಸಮುದಾಯದವರು ಪೈಪೋಟಿ ನಡೆಸುತ್ತಿದ್ದಾರೆ. ಈಡಿಗ ಸಮಾಜದವರು ಒಗ್ಗೂಡಿದರೆ ಸೌಲಭ್ಯ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಹಲವಾರು ವರ್ಷಗಳಿಂದ ಜೆ.ಪಿ ಫೌಂಡೇಶನ್ ವತಿಯಿಂದ ಅಶಕ್ತರು, ಬಡವರು, ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದು, ಅದಕ್ಕಾಗಿ ಪ್ರತಿ ವರ್ಷ ₹2 ಕೋಟಿ ವಿನಿಯೋಗಿಸಲಾಗುತ್ತಿದೆ. ನಮ್ಮ ತಂದೆ ಜೆ.ಪಿ.ನಾರಾಯಣಸ್ವಾಮಿ ಸಹ ಜಿಲ್ಲೆಯಲ್ಲಿ ಸಮುದಾಯದ ಪ್ರಗತಿಗೆ ಒತ್ತು ನೀಡಿದ್ದರು. ತಾವು ಸಹ ನೆರವಾಗುತ್ತಿದ್ದು, ನಗರದಲ್ಲಿ ನಿರ್ಮಿಸಲಿರುವ ಸಮುದಾಯ ಭವನಕ್ಕೆ ದೇಣಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ.ವಿ.ಅಜಯ್ ಕುಮಾರ್, ‘ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಸಂಘದಲ್ಲಿ ಉತ್ತಮ ಸೌಲಭ್ಯವಿದ್ದು ಸದುಪಯೋಗ ಪಡಿಸಿಕೊಂಡು ಪೋಷಕರಿಗೆ ಗೌರವ ತರಬೇಕು’ ಎಂದು ತಿಳಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಅವರು 2024-25ನೇ ಸಾಲಿನ ಲೆಕ್ಕಪತ್ರ ಮಂಡಿಸಿ ಒಪ್ಪಿಗೆ ಪಡೆದುಕೊಂಡರು.
ಸೋಲೂರು ಆರ್ಯ ಈಡಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಸಾಧಕರನ್ನು ಅಭಿನಂದಿಸಲಾಯಿತು. ಕೊರಟಗೆರೆ ವೈದ್ಯ ಮಲ್ಲಿಕಾರ್ಜುನ್, ನಾಗೇಂದ್ರ, ತುಮಕೂರು ಗ್ರಾಮಾಂತರದ ಯಲ್ಲಮ್ಮ, ಮಧುಗಿರಿ ಮುತ್ತುರಾಯಪ್ಪ, ಪಾವಗಡ ಅಶೋಕ್ ಕುಮಾರ್, ಗುಬ್ಬಿ ಮೋಹನ್ ರಾವ್, ರಾಜಣ್ಣ, ರಮೇಶ್ ಪಡಿ, ಸೋಮಶೇಖರ್, ಚಿಕ್ಕನಾಯಕನಹಳ್ಳಿ ಎಸ್.ಮಲ್ಲಿಕಾರ್ಜುನಯ್ಯ, ತುರುವೇಕೆರೆ ಉಮೇಶ್, ತಿಪಟೂರು ಉಗ್ರೇಗೌಡ, ಕುಣಿಗಲ್ ಕೆ.ವಿ.ಗುಂಡಣ್ಣ ಅವರನ್ನು ಗೌರವಿಸಲಾಯಿತು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ನಾಗರಾಜು, ಪೋಷಕರಾದ ಎಚ್.ಮಹದೇವ್, ಸಂಘದ ಸಲಹೆಗಾರ ಲಕ್ಷ್ಮಿನರಸಿಂಹಯ್ಯ, ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಚಂದ್ರಕಲಾ, ಖಜಾಂಚಿ ಎಚ್.ಎಂ.ಕುಮಾರ್, ಪದಾಧಿಕಾರಿಗಳಾದ ಕೆ.ಎ.ರವೀಂದ್ರ ಕುಮಾರ್, ಪುರುಷೋತ್ತಮ್, ನಾರಾಯಣಪ್ಪ, ಪಾವಗಡ ಆಂಜನೇಯಲು, ಮಂಜುನಾಥ್, ನಾರಾಯಣಸ್ವಾಮಿ, ದ್ರಾಕ್ಷಾಯಿಣಿ, ಲೆಕ್ಕಪರಿಶೋಧಕ ಅನ್ವರ್, ಓಬಳೇಶ್, ವಾರ್ಡನ್ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.