ಮಧುಗಿರಿ: ದೇಶದ ರೈತರ ಸಾಲ ಮನ್ನಾ ಮಾಡದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಪೊರೇಟ್ ಸಂಸ್ಥೆಗಳ ₹10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ದೂರಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ₹72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು ಎಂದರು.
ಚುನಾವಣಾ ಬಾಂಡ್ ಹೆಸರಿನಲ್ಲಿ ದೇಶದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ. ಮೋದಿ ಸರ್ಕಾರ ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಸಿಬಿಐ, ಇ.ಡಿ. ಮತ್ತು ಐ.ಟಿ ಇಲಾಖೆಗಳನ್ನು ಕೈಗೊಂಬೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ನಡೆಸುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಬಿಜೆಪಿಯ ವಾಷಿಂಗ್ ಮಿಷನ್‌ಗೆ ಸೇರಿಸಿಕೊಂಡು ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಜಾತಿ ವಾದಿಯಲ್ಲ, ಕುಟುಂಬವಾದಿ. ಹಾಸನ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಟುಂಬದವರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ನೀತಿ ಮತ್ತು ಸಿದ್ಧಾಂತಗಳನ್ನು ಗಾಳಿಗೆ ತೂರಿ ಕೋಮುವಾದಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂದು ದೂರಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರನ್ನು ಸೋಲಿಸಲು ಸಂಸದ ಜಿ.ಎಸ್. ಬಸವರಾಜು ಮತ್ತು ಈಗಿನ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹಳ್ಳಿ ಹಳ್ಳಿಗೂ ಒಡಾಡಿದ್ದರು. ಈಗ ದೇವೇಗೌಡರು ಪಕ್ಕದಲ್ಲೇ ಬಸವರಾಜು ಮತ್ತು ಸೋಮಣ್ಣ ಅವರನ್ನು ಕೂರಿಸಿಕೊಂಡು ‘ನನ್ನ ಸೋಲಿಗೆ ಕಾರಣರಾದವರನ್ನು ಸೋಲಿಸಬೇಕು’ ಎಂಬ ಹೇಳಿಕೆ ನೀಡುತ್ತಿದ್ದಾರೆ. ಅವರು ಹೇಳಿದಂತೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಸೋಲಿಸಬೇಕು ಎಂದು ಸಚಿವ ಕೆ.ಎನ್.ರಾಜಣ್ಣ ಕುಟುಕಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಲೋಕಸಭೆಯಲ್ಲಿ ಒತ್ತಾಯಿಸಿದ್ದೆ. ಆದರೆ ಕಳೆದ ಬಾರಿ ಸಂಸತ್ ಸದಸ್ಯರಾಗಿದ್ದ ಜಿ.ಎಸ್. ಬಸವರಾಜು ಒಮ್ಮೆಯೂ ಭಾರತ ರತ್ನದ ಬಗ್ಗೆ ಕೇಳಲಿಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ. ತುಮಕೂರು- ದಾವಣಗೆರೆ, ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಬಗ್ಗೆ ಒಂದೇ ಒಂದು ಅಧಿಕಾರಿಗಳ ಸಭೆಯನ್ನೂ ನಡೆಸಿಲ್ಲ ಎಂದು ಟೀಕಿಸಿದರು.
ವಿಧಾನ ಪರಿಷತ್ ಸದಸ್ಯ ರಾಜೇಂದ್ರ, ಜಿ.ಪಂ. ಮಾಜಿ ಅಧ್ಯಕ್ಷೆ ಶಾಂತಲಾ, ಜಿ.ಜೆ.ರಾಜಣ್ಣ, ರಾಜ್ಯ ಸಹಕಾರ ಮಹಾಮಂಡಳ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಅಯ್ಯೂಬ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.