ADVERTISEMENT

3 ವರ್ಷದಲ್ಲಿ ಅಂತರ್ಜಲ ವೃದ್ಧಿ: ಕೇಂದ್ರ ಜಲಶಕ್ತಿ ಅಭಿಯಾನ ತಂಡದ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 13:46 IST
Last Updated 16 ಜುಲೈ 2019, 13:46 IST
ಕೇಂದ್ರ ತಂಡದ ಅಧಿಕಾರಿಗಳು ಮಧುಗಿರಿ ತಾಲ್ಲೂಕಿನ ರೈತರಿಂದ ಮಾಹಿತಿ ಪಡೆದರು
ಕೇಂದ್ರ ತಂಡದ ಅಧಿಕಾರಿಗಳು ಮಧುಗಿರಿ ತಾಲ್ಲೂಕಿನ ರೈತರಿಂದ ಮಾಹಿತಿ ಪಡೆದರು   

ಮಧುಗಿರಿ: ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೀರು ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ 3 ವರ್ಷಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ ಎಂದು ಕೇಂದ್ರ ಜಲಶಕ್ತಿ ಅಭಿಯಾನ ತಂಡದ ಮುಖ್ಯಸ್ಥ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಆರ್.ಕೆ.ಚಂಡೋಲಿಯಾ ತಿಳಿಸಿದರು.

ಮಧುಗಿರಿ ತಾಲ್ಲೂಕು ದಬ್ಬೇಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಹರ ಗ್ರಾಮದಲ್ಲಿ ಮಂಗಳವಾರ ಪಂಚಾಯತ್ ರಾಜ್ ಇಲಾಖೆಯಿಂದ 2016–17ರಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಂ ವೀಕ್ಷಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ತೀವ್ರ ಅಂತರ್ಜಲ ಕುಸಿತವಾಗಿರುವ ಪ್ರದೇಶಗಳಲ್ಲಿ ನೀರು ಸಂರಕ್ಷಣಾ ಕಾಮಗಾರಿಗಳ ಬಗ್ಗೆ ಅಧ್ಯಯನಕ್ಕೆ ಕೇಂದ್ರ ಸರ್ಕಾರವು ತಂಡಗಳನ್ನು ನೇಮಿಸಿದೆ. ಈ ತಂಡವು ಎಲ್ಲ ರಾಜ್ಯಗಳ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ನೀರು ಸಂರಕ್ಷಣಾ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲಿದೆ ಎಂದರು.

ADVERTISEMENT

ಅಲ್ಲದೆ ಕಳೆದ 5 ವರ್ಷಗಳ ಅವಧಿಯಲ್ಲಿ ಇಲಾಖೆಗಳು ಅನುಷ್ಠಾನಗೊಳಿಸಿರುವ ಹಾಗೂ ಮುಂದಿನ 5 ವರ್ಷಗಳಲ್ಲಿ ಯೋಜಿಸಿರುವ ನೀರು ಸಂರಕ್ಷಣಾ ಕಾಮಗಾರಿಗಳ ಬಗ್ಗೆ ಮಾಹಿತಿ ಕ್ರೋಡೀಕರಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ನೀರಿನ ಬರವನ್ನು ತಗ್ಗಿಸಲು ಕೈಗೊಳ್ಳಬಹುದಾದ ಸೂಕ್ತ ಕ್ರಮಗಳ ಬಗ್ಗೆ ಕೇಂದ್ರದಲ್ಲಿ ನಿರ್ಣಯ ತೆಗೆದುಕೊಳ್ಳಲು ಈ ವರದಿ ನೆರವಾಗಲಿದೆ ಎಂದು ವಿವರಿಸಿದರು.

ಮಧುಗಿರಿ ತಾಲ್ಲೂಕು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಮಾತನಾಡಿ, ‘ಈ ಚೆಕ್‌ಡ್ಯಾಂ 1550 ಕ್ಯುಬಿಕ್ ಮೀಟರ್ ನೀರಿನ ಸಾಮರ್ಥ್ಯ ಹೊಂದಿದೆ. ಚೆಕ್‌ಡ್ಯಾಂ ನಿರ್ಮಾಣದಿಂದ ಬತ್ತಿ ಹೋಗಿದ್ದ ಸುತ್ತಮುತ್ತಲಿನ ಸುಮಾರು ಏಳೆಂಟು ಕೊಳವೆ ಬಾವಿಗಳಿಗೆ ಮರುಜೀವ ಬಂದಿದೆ. ಮಳೆ ಬಂದಾಗ ನೀರು ನಿಲ್ಲುವುದರಿಂದ ಕೃಷಿ ಚಟುವಟಿಕೆಗಳಿಗೂ ಪ್ರಯೋಜನ ಆಗುತ್ತದೆ ಎಂದು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ರೈತ ತಿಮ್ಮೇಗೌಡ ಮಾತನಾಡಿ, ‘ಚೆಕ್‌ಡ್ಯಾಂ ಕಟ್ಟಿದ ಮೇಲೆ ನಮ್ಮ ಹೊಲದಲ್ಲಿ ಒಣಗಿದ್ದ ತೆರೆದ ಬಾವಿಯಲ್ಲಿ 25 ಅಡಿ ಆಳದಲ್ಲಿ ಸದಾ ನೀರು ದೊರೆಯುವಂತಾಗಿದೆ. ಇದರಿಂದ ಕುಡಿಯುವ ನೀರಿಗೆ ಉಪಯೋಗವಾಗಿದೆ’ ಎಂದು ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ದೊಡ್ಡೇರಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ವಿಶೇಷ ಅನುದಾನದಡಿ ರೈತರ ಜಮೀನಿನಲ್ಲಿ ನೆಟ್ಟಿರುವ ಹುಣಸೆ ಗಿಡಗಳನ್ನು ವೀಕ್ಷಿಸಿದ ಚಂಡೋಲಿಯಾ, ಅರಣ್ಯ ಅಧಿಕಾರಿ ಚಂದ್ರಪ್ಪ ಅವರಿಂದ ಮಾಹಿತಿ ಪಡೆದರು.

ನಂತರ ಮಧುಗಿರಿ ತಾಲ್ಲೂಕು ಪಂಚಾಯಿತಿ ಕಟ್ಟಡ ಚಾವಣಿಗೆ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿರುವುದು ಮತ್ತು ಇದರಿಂದ ಪಕ್ಕದ ಕಲ್ಯಾಣಿಯಲ್ಲಿ ಇಂಗಿಸಲು ಮಾಡಿರುವ ವ್ಯವಸ್ಥೆಯನ್ನು ವೀಕ್ಷಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೊಡ್ಡರಂಗಯ್ಯ, ‘1671ರಲ್ಲಿ ರಾಜರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಕಲ್ಯಾಣಿಯು ಕಸಕಡ್ಡಿಗಳಿಂದ ಮುಚ್ಚಿತ್ತು. ₹ 10 ಲಕ್ಷ ವೆಚ್ಚದಲ್ಲಿ ಕಲ್ಯಾಣಿ ಹೂಳು ಎತ್ತಿ ಸ್ವಚ್ಛಗೊಳಿಸಿ ಇಂಗು ಗುಂಡಿಯಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಲೋಹಿತ್, ಪಟ್ಟಣದಲ್ಲಿ ಮಾಡಿರುವ ಇಂಗು ಗುಂಡಿ, ಮಳೆ ನೀರು ಸಂಗ್ರಹ ಪದ್ಧತಿಗಳ ಬಗ್ಗೆ ವಿವರಿಸಿದರು. ಪುರಸಭೆ ವ್ಯಾಪ್ತಿಯ ಎಲ್ಲ ಹೊಸ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವಾಗ ಮಳೆ ನೀರು ಸಂಗ್ರ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಟಿ.ಕೆ.ರಮೇಶ್ ಮಾತನಾಡಿದರು. ತಂಡದ ಬಿ.ಪಿ.ಬಿಮಲ್, ಕೆ.ಎ. ನಾಯ್ಡು, ದೊಡ್ಡೇರಿ ಗ್ರಾಮಪಂಚಾಯತಿ ಪಿಡಿಒ ಶಿಲ್ಪ ಇದ್ದರು.

ಇತರ ಜಿಲ್ಲೆಗಳಿಗೆ ಮಾದರಿ
ಚಂಡೋಳಿಯ ಅವರು ಮಾತನಾಡಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತದಿಂದ ನೀರು ಸಂರಕ್ಷಣಾ ಕಾರ್ಯಗಳನ್ನು ಅಭೂತಪೂರ್ವವಾಗಿ ಕೈಗೊಳ್ಳಲಾಗಿದೆ. ಇದು ಇತರ ಜಿಲ್ಲೆಗಳಿಗೆ ಮಾದರಿ ಆಗಿದೆ. ಕೇಂದ್ರವು ಹೊಸದಾಗಿ ಜಲಶಕ್ತಿ ಆಯೋಗ ಇಲಾಖೆಯನ್ನು ಸೃಜಿಸಿದ್ದು, ಜಲಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.

ನನ್ನ ನೇತೃತ್ವದ ತಂಡವು ಜಿಲ್ಲೆಯಲ್ಲಿ ಕೈಗೊಂಡಿರುವ ನೀರನ್ನು ಇಂಗಿಸುವ, ಚೆಕ್‌ಡ್ಯಾಂ ನಿರ್ಮಾಣ, ಮಳೆ ನೀರು ಸಂಗ್ರಹ ಅಳವಡಿಕೆ, ಗೋಕಟ್ಟೆ ನಿರ್ಮಾಣ, ಕೃಷಿ ಹೊಂಡ, ಗಿಡ ನೆಡುವ ಕಾರ್ಯಕ್ರಮ ಸೇರಿದಂತೆ ನೀರು ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಚಟುವಟಿಕೆಗಳನ್ನು ಅಧ್ಯಯನ ಮಾಡಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.