ADVERTISEMENT

ಸಿಇಟಿ; ಮೊದಲ ದಿನ ಪರೀಕ್ಷೆ ಸುಸೂತ್ರ

ತುಮಕೂರು ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 14:34 IST
Last Updated 29 ಏಪ್ರಿಲ್ 2019, 14:34 IST
ತುಮಕೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಸೋಮವಾರ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು
ತುಮಕೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಸೋಮವಾರ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು   

ತುಮಕೂರು: ತುಮಕೂರು ನಗರದಲ್ಲಿ 13 ಹಾಗೂ ತಿಪಟೂರು ಮತ್ತು ಶಿರಾದಲ್ಲಿ ತಲಾ 2 ಕೇಂದ್ರ ಸೇರಿದಂತೆ ಒಟ್ಟು 17 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಿತು.

ಬೆಳಿಗ್ಗೆ ಜೀವ ವಿಜ್ಞಾನ ಮತ್ತು ಮಧ್ಯಾಹ್ನ ಗಣಿತ ವಿಷಯಕ್ಕೆ ಸಂಬಂಧಪಟ್ಟಂತೆ ಪರೀಕ್ಷೆ ನಡೆಯಿತು. ಜಿಲ್ಲೆಯ ಎಲ್ಲ 17 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಶಾಂತಿಯುತವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದ್ಯಾರ್ಥಿ, ವಿದ್ಯಾರ್ಥಿನಿಯರೊಂದಿಗೆ ಪೋಷಕರು ಪರೀಕ್ಷಾ ಕೇಂದ್ರದವರೆಗೂ ಬಂದು ಮಕ್ಕಳಿಗೆ ಪರೀಕ್ಷೆ ಚೆನ್ನಾಗಿ ಬರೆಯಲು ಆತ್ಮಸ್ಥೈರ್ಯ ತುಂಬಿದವರು. ಆಪ್ತರು, ಹಿರಿಯ ಸ್ನೇಹಿತರು, ಗೆಳತಿಯರೂ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಹೇಗೆ ಯಶಸ್ವಿಯಾಗಿ ಎದುರಿಸಬೇಕು ಎಂಬುದರ ಕುರಿತು ಸಲಹೆ ನೀಡಿ ಕಳಿಸುತ್ತಿದ್ದುದು ಕಂಡು ಬಂದಿತು.

ADVERTISEMENT

ತುಮಕೂರಿನ 13 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ನಡೆದ ಜೀವ ವಿಜ್ಞಾನ ವಿಷಯಕ್ಕೆ ಒಟ್ಟು 5723 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಇದರಲ್ಲಿ 1049 ಮಂದಿ ಗೈರಾಗಿದ್ದರು.

ಮಧ್ಯಾಹ್ನ ನಡೆದ ಗಣಿತ ವಿಷಯ ಪರೀಕ್ಷೆಗೆ 5725 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದರು. 482 ಮಂದಿ ಪರೀಕ್ಷೆಗೆ ಗೈರಾಗಿದ್ದರು ಎಂದು ಪರೀಕ್ಷಾ ಮಾರ್ಗದರ್ಶಿ ಅಧಿಕಾರಿ (ರೂಟ್ ಆಫಿಸರ್) ಮಹದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿರಾದಲ್ಲಿನ 2 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ನಡೆದ ಜೀವ ವಿಜ್ಞಾನ ವಿಷಯಕ್ಕೆ ಒಟ್ಟು 733 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದರು. ಇದರಲ್ಲಿ 633 ಹಾಜರಾಗಿದ್ದು, 70 ಮಂದಿ ಗೈರಾಗಿದ್ದರು. ಮಧ್ಯಾಹ್ನ ನಡೆದ ಗಣಿತ ವಿಷಯಕ್ಕೆ 694 ಮಂದಿ ಹಾಜರಾಗಿ 39 ಮಂದಿ ಗೈರಾಗಿದ್ದರು ಎಂದು ಮಾರ್ಗದರ್ಶಿ ಅಧಿಕಾರಿ ಎಸ್.ಎನ್.ರಾಜು ತಿಳಿಸಿದರು.

ತಿಪಟೂರಿನ 2 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ನಡೆದ ಜೀವ ವಿಜ್ಞಾನ ವಿಷಯಕ್ಕೆ ನೋಂದಣಿ ಮಾಡಿಸಿಕೊಂಡ 1228 ವಿದ್ಯಾರ್ಥಿಗಳಲ್ಲಿ 1049 ಮಂದಿ ಹಾಜರಾಗಿ 179 ಮಂದಿ ಗೈರಾಗಿದ್ದರು. ಗಣಿತ ವಿಷಯಕ್ಕೆ 1121 ಹಾಜರಾಗಿ, 107 ಮಂದಿ ಗೈರಾಗಿದ್ದರು ಎಂದು ಮಾರ್ಗದರ್ಶಿ ಅಧಿಕಾರಿ ಜಯರಾಮ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.