ತುಮಕೂರು: ‘ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ (ಕೋಮಾ) ಇರದೇ ಇದಿದ್ದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯವರ ಆಡಳಿತ ನೋಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದರು’ ಎಂದು ಹಿರಿಯ ಸಾಹಿತಿ, ವಿಮರ್ಶಕ ಚಂದ್ರಶೇಖರ ಪಾಟೀಲ ಹೇಳಿದರು.
ಬಂಡಾಯ ಸಾಹಿತ್ಯ ಸಂಘಟನೆಯು ಆಯೋಜಿಸಿದ ‘ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ’ ಎಂಬ ವಿಷಯ ಕುರಿತ ರಾಜ್ಯಮಟ್ಟದ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿದರು.
70 ದಶಕದ ಸಮಸ್ಯೆ, ಸವಾಲು, ಶೋಷಣೆ, ಚಳವಳಿ ಎಲ್ಲವೂ ಈಗಿನ ಕಾಲದಲ್ಲೂ ಇವೆ. ಬಂಡಾಯ ಚಳವಳಿಗೆ ಮೇಲ್ನೋಟಕ್ಕೆ ‘ಕೋಮಾ’ ಆವರಿಸಿದಂತೆ ಕಂಡರೂ ಅದರ ಸೆಲೆಗಳು ಬತ್ತಿಲ್ಲ. ಆ ಸೆಲೆಗಳು ಪುನರುಜ್ಜೀವನಗೊಳ್ಳಬೇಕು. ಹಳೇ ಬೇರು ಹೊಸ ಚಿಗುರು ಎಂಬಂತೆ ಹೊಸ ಪೀಳಿಗೆಯ ಜತೆ ಬಂಡಾಯ ಸಾಹಿತ್ಯ ಸಂಘಟನೆ ಜಾಗೃತವಾಗಿದೆ. ನಾವು ನಿರಾಶರಾಗಬೇಕಿಲ್ಲ. ಭರವಸೆಯನ್ನು ಒಳಗಡೆ ಇಟ್ಟುಕೊಂಡು ಚಿಂತನೆಗಳನ್ನು ಹಬ್ಬಿಸುವ ಕೆಲಸ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ಪಡೆಯಲು ನಾವು ನಿತ್ಯ ಹೋರಾಟ ಮಾಡುತ್ತಲೇ ಇರಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.