ADVERTISEMENT

‘ಕೈ’ ಹಿಡಿಯಲು ಚನ್ನಿಗಪ್ಪ ಪುತ್ರರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 3:32 IST
Last Updated 26 ಅಕ್ಟೋಬರ್ 2021, 3:32 IST

ಕೊರಟಗೆರೆ: ಮಾಜಿ ಸಚಿವ ಸಿ. ಚನ್ನಿಗಪ್ಪ ಅವರ ಹಿರಿಯ ಪುತ್ರ ಡಿ.ಸಿ. ಅರುಣ್ ಕುಮಾರ್ ಹಾಗೂ ಕಿರಿಯ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಸಿ. ವೇಣುಗೋಪಾಲ್ ಕಾಂಗ್ರೆಸ್ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಚೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಪೂಜೆ ಸಲ್ಲಿಸಿದ ಬಳಿಕ ಅರುಣ್‌ ಕುಮಾರ್‌ ಮಾತನಾಡಿ, ರಾಜಕೀಯ ಭವಿಷ್ಯವನ್ನು ಕಾಂಗ್ರೆಸ್‌ನಲ್ಲಿ ರೂಪಿಸಿಕೊಳ್ಳಲಾಗುವುದು. ಶಾಸಕ ಡಾ.ಜಿ. ಪರಮೇಶ್ವರ ಪರ ಕ್ಷೇತ್ರದಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು. ನನ್ನ ತಂದೆಯ ಮೇಲೆ ಕ್ಷೇತ್ರದ ಜನರು ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಪರಮೇಶ್ವರ ಮೇಲೂ ಇಟ್ಟು ಮುಂದಿನ ದಿನಗಳಲ್ಲಿ ಜನರು ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕು ಎಂದರು.

‘ಚನ್ನಿಗಪ್ಪ ಅವರು ಈ ಕ್ಷೇತ್ರದಲ್ಲಿ ಮೂರು ಬಾರಿ ಜೆಡಿಎಸ್‌ನಿಂದ ಆಯ್ಕೆಯಾಗಿ ಸಚಿವರಾಗಿದ್ದರು. ಹ್ಯಾಟ್ರಿಕ್ ಸಾಧನೆ ಮಾಡಿ ಕ್ಷೇತ್ರದ ಮನೆ ಮಗನಾಗಿ ಜನಸೇವೆ ಮಾಡಿದರು. ತಂದೆಯ ಆಶಯದಂತೆ ಕೊರಟಗೆರೆ ತಾಲ್ಲೂಕಿನಲ್ಲಿ ನನ್ನ ರಾಜಕೀಯ ಭವಿಷ್ಯ ಪ್ರಾರಂಭಿಸಲಾಗುವುದು’ ಎಂದರು.

ADVERTISEMENT

‘ಈ ಬಾರಿ ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಇರಾದೆ ಇದೆ. ಅವಕಾಶ ನೋಡಿ ನಿರ್ಧರಿಸಲಾಗುವುದು. ಇದರೊಂದಿಗೆ ಪರಮೇಶ್ವರ ಅವರ ಗೆಲುವಿಗೆ ಟೊಂಕಕಟ್ಟಿ ಈಗಿನಿಂದಲೇ ಕೆಲಸ ಮಾಡುತ್ತೇನೆ. ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಕೆ.ಎನ್. ರಾಜಣ್ಣ ಅವರ ಮಗ ರಾಜೇಂದ್ರ ಅವರ ಗೆಲುವಿಗೂ ಶ್ರಮಿಸಲಾಗುವುದು’ ಎಂದು ತಿಳಿಸಿದರು.

‘ನನ್ನ ಸಹೋದರ ಶಾಸಕ ಗೌರಿಶಂಕರ್ ಜೆಡಿಎಸ್ ಪಕ್ಷದಲ್ಲಿಯೇ ಮುಂದುವರಿಯಲಿದ್ದಾರೆ. ಅವರು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ. ಆದರೆ, ನಾನು ಹಾಗೂ ನನ್ನ ಕಿರಿಯ ಸಹೋದರ ಕಾಂಗ್ರೆಸ್ ಸೇರ್ಪಡೆಗೊಂಡು ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದೇವೆ’ ಎಂದು
ಹೇಳಿದರು.

ತುಮಕೂರು ಗ್ರಾಮಾಂತರ ಕಾರ್ಮಿಕ ಒಕ್ಕೂಟದ ಸಂಪತ್ ಕುಮಾರ್, ಕಾಂಗ್ರೆಸ್ ಮುಖಂಡ ಸಿ. ರಂಗಯ್ಯ, ಮುಖಂಡರಾದ ಕುಮಾರಣ್ಣ, ಮಹೇಶ್, ಚಂದ್ರು, ಕೆಂಪರಾಜು, ಎಲೆರಾಂಪುರ ಗ್ರಾ.ಪಂ. ಅಧ್ಯಕ್ಷೆ ಗಂಗಾದೇವಿ, ಸದಸ್ಯರಾದ ರಂಗಶಾಮಯ್ಯ, ಗೀತಾ ನರಸಿಂಹರಾಜು, ಮಮತಾ ರಂಗಮುತ್ತಯ್ಯ, ಗಂಗಮ್ಮ ರಾಕೇಶ್, ಹನುಮಂತರಾಯಪ್ಪ, ತ್ರಿವೇಣಿ ತಿಮ್ಮರಾಜು, ಕುಮಾರ್, ಚಂದ್ರಣ್ಣ, ಸರ್ವೇಶ್ ಎನ್.ಎಚ್., ಮುಖಂಡ ಸಿಂಗ್ರೀಹಳ್ಳಿ ಚಂದ್ರಣ್ಣ, ಕಾಂತರಾಜು, ದೇವರಾಜು, ರಾಮಣ್ಣ, ಜಯರಾಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.