ADVERTISEMENT

ದಾರ್ಶನಿಕರ ಜಯಂತ್ಯುತ್ಸವ: ದೇಸಿ ಸಂಸ್ಕೃತಿಯ ಕಲಾ ವೈಭವ

ಮಹಾತ್ಮ ಗಾಂಧೀಜಿ ಮತ್ತು ಬಿ.ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣ: ಒಂದೇ ವೇದಿಕೆಯಲ್ಲಿ ವಿವಿಧ ಸಮುದಾಯಗಳ ಸ್ವಾಮೀಜಿ ಭಾಗಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:08 IST
Last Updated 27 ನವೆಂಬರ್ 2025, 5:08 IST
ಚಿಕ್ಕನಾಯಕನಹಳ್ಳಿಯಲ್ಲಿ ದಾರ್ಶನಿಕರ ಗ್ರಂಥ ಬಿಡುಗಡೆ ಮಾಡಲಾಯಿತು
ಚಿಕ್ಕನಾಯಕನಹಳ್ಳಿಯಲ್ಲಿ ದಾರ್ಶನಿಕರ ಗ್ರಂಥ ಬಿಡುಗಡೆ ಮಾಡಲಾಯಿತು   

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಬುಧವಾರ ‘ಸರ್ವ ದಾರ್ಶನಿಕರ ಜಯಂತ್ಯುತ್ಸವ’ ನಡೆಯಿತು.

ತಾಲ್ಲೂಕು ಕಚೇರಿ ಮುಂಭಾಗ ಮಹಾತ್ಮ ಗಾಂಧೀಜಿ ಮತ್ತು ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಕಾಗಿನೆಲೆ ಮಹಾಸಂಸ್ಥಾನ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅನಾವರಣಗೊಳಿಸಿದರು.

ತಾಲ್ಲೂಕು ಕಚೇರಿ ಮುಂಭಾಗದಿಂದ ಪ್ರಾರಂಭವಾದ ಎಲ್ಲ ಮಹನೀಯರ ಭಾವಚಿತ್ರಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ದೇಸಿ ಸಂಸ್ಕೃತಿ ಪ್ರತಿಬಿಂಬಿಸುವ ಕಲಾ ವೈಭವ ಕಳೆಗಟ್ಟಿತ್ತು. ಡೊಳ್ಳು ಕುಣಿತ, ವೀರಗಾಸೆ, ಕೋಲಾಟ ಮತ್ತು ಕಂಸಾಳೆ ನೃತ್ಯಗಳು ನೋಡುಗರನ್ನು ಆಕರ್ಷಿಸಿತು.

ADVERTISEMENT

ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಸರ್ವ ದಾರ್ಶನಿಕರ ಜಯಂತ್ಯುತ್ಸವದಲ್ಲಿ ಎಲ್ಲ ಮಹನೀಯರ ತತ್ವಗಳನ್ನು ಒಂದೆಡೆ ಸಂಗ್ರಹಿಸಿ ಸಿದ್ಧಪಡಿಸಲಾದ ವಿಶೇಷ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಈ ಗ್ರಂಥದಲ್ಲಿ ಎಲ್ಲ ದಾರ್ಶನಿಕರ ಪ್ರಮುಖ ಸಂದೇಶ ಮತ್ತು ತತ್ವಗಳನ್ನು ಅಡಕವಾಗಿವೆ. ತಾಲ್ಲೂಕಿನ ಜನರಿಗೆ ಮತ್ತು ಮುಂದಿನ ಪೀಳಿಗೆಗೆ ಸಮಗ್ರ ಜ್ಞಾನ ಒದಗಿಸುವ ಶಾಶ್ವತ ದಾಖಲೆಯಾಗಲಿದೆ.

ತಾಲ್ಲೂಕಿನ ವಿಶಿಷ್ಟತೆಯನ್ನು ಪ್ರತಿಬಿಂಬಿಸುವ ಭೂಪಟದ ಲಾಂಛನವನ್ನು ಬಿಡುಗಡೆ ಮಾಡಲಾಯಿತು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಸುಲಭವಲ್ಲ. ಆದರೂ ಆ ಸತ್ಕಾರ್ಯಕ್ಕೆ ಕೈಹಾಕಿರುವುದು ಪವಿತ್ರ ಕೆಲಸ. ಜೀವನವನ್ನು ಪವಿತ್ರಗೊಳಿಸಿಕೊಳ್ಳುವುದಕ್ಕಾಗಿ ದಾರ್ಶನಿಕರನ್ನು ನಿರಂತರವಾಗಿ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಪ್ರತಿ ವರ್ಷ ದಾರ್ಶನಿಕರ ಜಯಂತಿ ಆಚರಿಸುತ್ತೇವೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಆ ಸಮಾಜದವರೇ ಆಗಿರುತ್ತಾರೆ. ಅದನ್ನು ತಪ್ಪಿಸಿ ಎಲ್ಲ ದಾರ್ಶನಿಕರ ಜಯಂತಿಯನ್ನು ಒಮ್ಮೆಲೇ ಆಚರಣೆ ಮಾಡುವ ಒಳ್ಳೆಯ ಸಂಪ್ರದಾಯವನ್ನು ಶಾಸಕ ಸಿ.ಬಿ. ಸುರೇಶ್ ಬಾಬು ಪ್ರಾರಂಭ ಮಾಡಿದ್ದಾರೆ ಎಂದರು.

ದಾರ್ಶನಿಕರ 60 ಪುಟಗಳ ಗ್ರಂಥವನ್ನು ಸಾಹಿತಿ ನಾಡೋಜ ಹಂಪನಾಗರಾಜಯ್ಯ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಬಿಎಂಟಿಸಿ ಉಪಾಧ್ಯಕ್ಷರಾದ ನಿಖೇತ್ ರಾಜ್ ಮೌರ್ಯ, ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಭೂ ಪಟದ ಲಾಂಛನ ಅನಾವರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.