ADVERTISEMENT

ಚಿಕ್ಕನಾಯಕನಹಳ್ಳಿ | 10 ಸರ್ಕಾರಿ ಸಂಕೀರ್ಣ ಶಾಲೆ ಶೀಘ್ರ ಮಂಜೂರು– ಸುರೇಶ್‌ಬಾಬು

ಶಾಸಕ ಸಿ.ಬಿ. ಸುರೇಶ್‌ಬಾಬು ಭರವಸೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:42 IST
Last Updated 28 ಜನವರಿ 2026, 6:42 IST
ಚಿಕ್ಕನಾಯಕನಹಳ್ಳಿ ‘ಜ್ಞಾನಕಲ್ಪ’ ನೀಟ್ ತರಬೇತಿಯಲ್ಲಿ ಸರ್ಕಾರಿ ಕೋಟಾದಡಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು
ಚಿಕ್ಕನಾಯಕನಹಳ್ಳಿ ‘ಜ್ಞಾನಕಲ್ಪ’ ನೀಟ್ ತರಬೇತಿಯಲ್ಲಿ ಸರ್ಕಾರಿ ಕೋಟಾದಡಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಹೊಸ ವೇಗ ನೀಡುವ ಉದ್ದೇಶದಿಂದ ಯುಕೆಜಿಯಿಂದ ಪಿಯುಸಿವರೆಗೆ ಒಂದೇ ಆವರಣದಲ್ಲಿ ಶಿಕ್ಷಣ ನೀಡುವ ತಲಾ ಐದು ಎಕರೆ ವಿಸ್ತೀರ್ಣದ 10 ಸರ್ಕಾರಿ ಸಂಕೀರ್ಣ ಶಾಲೆಗಳನ್ನು ಈಗಾಗಲೇ ಮಂಜೂರು ಮಾಡಿಸಲಾಗಿದೆ. ಶೀಘ್ರದಲ್ಲೇ ಇವು ಕಾರ್ಯಾರಂಭ ಮಾಡಲಿವೆ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ತಿಳಿಸಿದರು.

ಪಟ್ಟಣದ ತೀನಂಶ್ರೀ ಭವನದಲ್ಲಿ ಸೋಮವಾರ ಎಸ್‌.ಬಿ. ಚಾರಿಟಬಲ್ ಟ್ರಸ್ಟ್‌ನಿಂದ ನಡೆದ ‘ಜ್ಞಾನಕಲ್ಪ’ ಸಿಇಟಿ/ನೀಟ್ ತರಬೇತಿ ಶಿಬಿರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಮುಂದಿನ ಹತ್ತು ವರ್ಷಗಳಲ್ಲಿ ತಾಲ್ಲೂಕಿನ ಪ್ರತಿಯೊಂದು ಮನೆಯಲ್ಲಿ ಒಬ್ಬ ಅಧಿಕಾರಿ ಇರಬೇಕು ಎಂಬುದು ನನ್ನ ಆಶಯ. ಜಾತಿ, ಪಕ್ಷದ ಭೇದವಿಲ್ಲದೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಬೇಕಾದ ಎಲ್ಲ ಸಹಕಾರ ನೀಡಲು ನಾನು ಸಿದ್ಧ’ ಎಂದರು.

ADVERTISEMENT

ತಹಶೀಲ್ದಾರ್ ಮಮತಾ ಎಂ. ಮಾತನಾಡಿ, ವಿದ್ಯಾರ್ಥಿಗಳು ಸಮಯ ಸದ್ಬಳಕೆ ಮಾಡಿಕೊಂಡು ದೃಢನಿರ್ಧಾರ ಮತ್ತು ಶಿಸ್ತಿನಿಂದ ಗುರಿಯತ್ತ ಸಾಗಬೇಕು. ಹೆಣ್ಣುಮಕ್ಕಳು ಅಡೆತಡೆಗಳಿಗೆ ಧೃತಿಗೆಡದೆ ಶಿಕ್ಷಣ ಪಡೆದು ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್, ನಿವೃತ್ತ ತಹಶೀಲ್ದಾರ್ ಲಕ್ಷ್ಮಣಪ್ಪ, ಸಂಪನ್ಮೂಲ ವ್ಯಕ್ತಿ ಕೃಷ್ಣ ಚೈತನ್ಯ ಮಾತನಾಡಿದರು.

ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ರಾಘವೇಂದ್ರ, ಪಿಎಲ್‌ಡಿ ಬ್ಯಾಂಕ್ ಉಪಾದ್ಯಕ್ಷ ರವಿಕುಮಾರ್‌ ದಬ್ಬಗುಂಟೆ, ನಿರ್ದೇಶಕ ರಾಮಚಂದ್ರಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಸಿಇಟಿ ಸಮಿತಿ ಸದಸ್ಯರು, ಕಾಲೇಜು ಪ್ರಾಂಶುಪಾಲರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.