ADVERTISEMENT

ಚಿಕ್ಕನಾಯಕನಹಳ್ಳಿ ಪುರಸಭೆ: ಜೆಡಿಎಸ್‌ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 3:30 IST
Last Updated 4 ನವೆಂಬರ್ 2020, 3:30 IST
ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಸದಸ್ಯರು ಅಭಿನಂದಿಸಿದರು
ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಸದಸ್ಯರು ಅಭಿನಂದಿಸಿದರು   

ಚಿಕ್ಕನಾಯಕನಹಳ್ಳಿ: ಪುರಸಭೆ ನೂತನ ಅಧ್ಯಕ್ಷರಾಗಿ ಜೆಡಿಎಸ್‌ನ ಪುಷ್ಪಹನುಮಂತರಾಜು ಹಾಗೂ ಉಪಾಧ್ಯಕ್ಷರಾಗಿ ರೇಣುಕಾ ಗುರುಮೂರ್ತಿ ಆಯ್ಕೆಯಾದರು.

23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್‌ನ 14, ಬಿಜೆಪಿಯ 5, ಕಾಂಗ್ರೆಸ್‌ನ ಇಬ್ಬರು ಹಾಗೂ ಇಬ್ಬರು ‍ಪಕ್ಷೇತರ ಸದಸ್ಯರಿದ್ದರು.

ಅಧ್ಯಕ್ಷ ಸ್ಥಾನದ ಮೀಸಲಾತಿ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿತ್ತು.

ADVERTISEMENT

ಜೆಡಿಎಸ್‌ನ 22ನೇ ವಾರ್ಡ್ ಸದಸ್ಯೆ ಪುಷ್ಪ ಹನುಮಂತರಾಜು ಹಾಗೂ ಬಿಜೆಪಿಯ 4 ನೇ ವಾರ್ಡ್ ಸದಸ್ಯ ಡಿ.ಕೆ. ನಾಗರಾಜು ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.

ಜೆಡಿಎಸ್ ಅಭ್ಯರ್ಥಿಗೆ 14 ಮತ ಹಾಗೂ ಬಿಜೆಪಿ ಅಭ್ಯರ್ಥಿಗೆ 11 ಮತ ದೊರೆತದ್ದರಿಂದ ತಹಶೀಲ್ದಾರ್ ತೇಜಸ್ವಿನಿ ಜೆಡಿಎಸ್ ಅಭ್ಯರ್ಥಿ ಪುಷ್ಪ ಹನುಮಂತರಾಜು ಅವರನ್ನು ಅಧ್ಯಕ್ಷರೆಂದು ಘೋಷಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ 18ನೇ ವಾರ್ಡ್ ಸದಸ್ಯೆ ಸಿ.ಎಂ. ರೇಣುಕಮ್ಮ ಗುರುಮೂರ್ತಿ ಹಾಗೂ ಕಾಂಗ್ರೆಸ್‌ನ 23ನೇ ವಾರ್ಡ್ ಸದಸ್ಯೆ ಉಮಾ ಪರಮೇಶ್ ನಾಮಪತ್ರ ಸಲ್ಲಿಸಿದ್ದರು.

ಜೆಡಿಎಸ್ ಅಭ್ಯರ್ಥಿಗೆ 14, ಕಾಂಗ್ರೆಸ್ ಅಭ್ಯರ್ಥಿಗೆ 11 ಮತ ದೊರೆತಿತ್ತು.

ಅಖಾಡಕ್ಕಿಳಿದಿದ್ದ ಸಚಿವ, ಸಂಸದರಿಗೆ ನಿರಾಸೆ: ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ದೊರಕಿಸಿ ಕೊಡಲೇಬೇಕು ಎಂದು ಸಚಿವ ಮಾಧುಸ್ವಾಮಿ, ಸಂಸದ ಬಸವರಾಜ್ ಅಖಾಡಕ್ಕಿಳಿದರೂ ಪ್ರಯೋಜನವಾಗಲಿಲ್ಲ.

ಬಿಜೆಪಿ ಹಾಗೂ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ 5, ಕಾಂಗ್ರೆಸ್‌ನ ಇಬ್ಬರು, ಇಬ್ಬರು ಪಕ್ಷೇತರರು ಹಾಗೂ ಸಚಿವ ಹಾಗೂ ಸಂಸದರ ಮತ ಸೇರಿ ಒಟ್ಟು 11 ಮತವನ್ನು ಗಳಿಸಲಷ್ಟೇ ಸಾಧ್ಯವಾಯಿತು.

ಪಟ್ಟಣದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಶ್ರಮಿಸುತ್ತೇವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗದುಕೊಂಡು ಕಾರ್ಯನಿರ್ವಹಿಸುವುದಾಗಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉ‍‍ಪಾಧ್ಯಕ್ಷರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.