ADVERTISEMENT

ಶೆಟ್ಟಿಕೆರೆ| ರಸ್ತೆ ಸಂಚಾರ ಸವಾಲು: ಗುಂಡಿ ರಸ್ತೆ ಪಯಣಕ್ಕೆ ಬೇಕು ‘ಎಂಟು ಗುಂಡಿಗೆ’

ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 7:32 IST
Last Updated 30 ಅಕ್ಟೋಬರ್ 2025, 7:32 IST
<div class="paragraphs"><p>ಪಟ್ಟಣದಿಂದ ಬಸವೇಶ್ವರನಗರ ಮಾರ್ಗದ ರಸ್ತೆ</p></div>

ಪಟ್ಟಣದಿಂದ ಬಸವೇಶ್ವರನಗರ ಮಾರ್ಗದ ರಸ್ತೆ

   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾದ ಶೆಟ್ಟಿಕೆರೆ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಗುಂಡಿಮಯವಾಗಿ ಮಾರ್ಪಟ್ಟಿದೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಸಾರ್ವಜನಿಕರು ಪ್ರತಿನಿತ್ಯ ಜೀವಭಯದಲ್ಲಿ ಸಂಚರಿಸುವಂತಾಗಿದೆ.

ADVERTISEMENT

ಪಟ್ಟಣದಿಂದ ಶೆಟ್ಟಿಕೆರೆ ಮಾರ್ಗವಾಗಿ ಹೋಗುವ ಈ ರಸ್ತೆ ಶೆಟ್ಟಿಕೆರೆ ಗೇಟ್‌ನಿಂದಲೇ ಗುಂಡಿಗಳಿಂದ ಪ್ರಯಾಣಿಕರನ್ನು ಸ್ವಾಗತಿಸುತ್ತದೆ. ಶೆಟ್ಟಿಕೆರೆ ಹೋಬಳಿಯ ನೂರಾರು ಗ್ರಾಮಗಳ ಜನರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೂ, ರಸ್ತೆ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಸಂಚಾರ ದುಸ್ತರವಾಗಿದೆ.

ದ್ವಿಚಕ್ರ ವಾಹನ ಸವಾರರ ಪರಿಸ್ಥಿತಿ ಹೇಳತೀರದು. ರಸ್ತೆಯಲ್ಲಿ ಜೀವಭಯದಿಂದಲೇ ಸಾಗಬೇಕಿದೆ. ಒಂದು ಗುಂಡಿ ತಪ್ಪಿಸಲು ಹೋದರೆ, ಆಯತಪ್ಪಿ ಮತ್ತೊಂದು ಗುಂಡಿಯಲ್ಲಿ ವಾಹನ ಇಳಿಸಬೇಕಾದ ಅನಿವಾರ್ಯತೆ ಇದೆ. ಈ ಅಪಾಯಕಾರಿ ಸಂಚಾರದಿಂದಾಗಿ ವಾಹನ ಸವಾರರು ಮತ್ತು ಹಿಂಬದಿ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡ ನಿದರ್ಶನಗಳಿವೆ.

ಕೆಲವೇ ದಿನಗಳ ಹಿಂದೆ ಈ ರಸ್ತೆಯ ಗುಂಡಿಗಳ ಕಾರಣದಿಂದಲೇ ಗಂಭೀರ ಅಪಘಾತ ಸಂಭವಿಸಿದೆ. ಶೆಟ್ಟಿಕೆರೆ ಕೆರೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿಯಿಂದ ಬಂದ ಸರಕು ಸಾಗಣೆ ವಾಹನದ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಪುರಸಭೆ ವ್ಯಾಪ್ತಿಯ ಕೇದಿಗೆಹಳ್ಳಿ ಪ್ರದೇಶದಲ್ಲಿ ರಸ್ತೆ ಹಾಳಾಗಲು ಪುರಸಭೆಯೂ ಪರೋಕ್ಷವಾಗಿ ಕಾರಣವಾಗಿದೆ. ಮಳೆಗಾಲ ಸಂದರ್ಭದಲ್ಲಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯಲು ಆಗದೆ ರಸ್ತೆಯ ಮೇಲೆ ಹರಿದು ನಿಂತಿದ್ದರಿಂದ ರಸ್ತೆಗಳ ಅಡಿಪಾಯ ಶಿಥಿಲಗೊಂಡಿದೆ. ಇದಕ್ಕೆ ಪುರಸಭೆಯ ಸಮರ್ಪಕ ಒಳಚರಂಡಿ ನಿರ್ವಹಣೆಯ ಕೊರತೆ ಒಂದು ಪ್ರಮುಖ ಕಾರಣ ಎನ್ನುತ್ತಾರೆ ಸ್ಥಳೀಯರು.

ಪಟ್ಟಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾದ ಕುಪ್ಪೂರು, ಕೈಮರ ಮಾರ್ಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಬೃಹತ್ ಗುಂಡಿಗಳ ಆಗರವಾಗಿದೆ.

ಪಟ್ಟಣದಿಂದ ಹೊರಟು ಮತ್ತಿಘಟ್ಟ ಮಾರ್ಗವಾಗಿ ಸಾಗುವ ರಸ್ತೆಯ ಬಹುತೇಕ ಎಲ್ಲ ಕಡೆ ಆಳವಾದ ಗುಂಡಿಗಳಿಂದ ತುಂಬಿಹೋಗಿದೆ. ನವಿಲೆ ಕೆರೆ ಸಮೀಪದಲ್ಲಿರುವ ರಸ್ತೆಯ ಭಾಗ ಹೆಚ್ಚು ಹಾಳಾಗಿದೆ. ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಮತ್ತು ಆಳವಾದ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ತಮ್ಮ ಸಮತೋಲನ ಕಳೆದುಕೊಳ್ಳುವ ಅಪಾಯ ತೀವ್ರವಾಗಿದೆ. ರಾತ್ರಿ ಸಮಯದಲ್ಲಿ ಮತ್ತು ಮಳೆಗಾಲದಲ್ಲಿ ಈ ಗುಂಡಿಗಳು ನೀರಿನಿಂದ ತುಂಬಿ, ಅವುಗಳ ಆಳ ತಿಳಿಯದೆ ಅಪಘಾತಗಳು ಸಂಭವಿಸುವ ಭೀತಿ ಇದೆ.

ಈ ಮಾರ್ಗದಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು ಮತ್ತು ವೃದ್ಧರು ಆಟೊ ಮತ್ತು ದ್ವಿಚಕ್ರ ವಾಹನಗಳನ್ನೇ ಅವಲಂಬಿಸಿದ್ದಾರೆ. ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಸಂಚರಿಸುವಾಗ ಅತಿಯಾದ ಏರಿಳಿತ ಮತ್ತು ಆಘಾತಗಳಿಂದ ಪ್ರಯಾಣಿಕರು ಪ್ರತಿದಿನ ಪರದಾಡುವಂತಾಗಿದೆ.

ವಾಹನಗಳ ಟೈರ್‌, ಆ್ಯಕ್ಸೆಲ್‌ ಮತ್ತು ಇತರ ಬಿಡಿಭಾಗಗಳು ಬೇಗನೆ ಹಾಳಾಗುತ್ತಿವೆ. ಇದರಿಂದಾಗಿ ವಾಹನಗಳ ನಿರ್ವಹಣಾ ವೆಚ್ಚವು ವಿಪರೀತ ಹೆಚ್ಚಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ರಸ್ತೆಯನ್ನು ಸುಸ್ಥಿತಿಯಲ್ಲಿಡದ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಈ ಅಧ್ವಾನಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮುಂಜಾಗ್ರತಾ ಕ್ರಮದ ಕೊರತೆ ಪ್ರಮುಖ ಕಾರಣ. ರಸ್ತೆಯಲ್ಲಿ ಸಣ್ಣ ಗುಂಡಿಗಳು ಕಾಣಿಸಿಕೊಂಡಾಗಲೇ ಎಚ್ಚೆತ್ತುಕೊಂಡು ಸರಿಪಡಿಸಿದರೆ ಒಳಿತು ಎನ್ನುತ್ತಾರೆ ಸಾರ್ವಜನಿಕರು.

ಶೆಟ್ಟಿಕೆರೆ- ಚಿಕ್ಕನಾಯಕನಹಳ್ಳಿ ರಸ್ತೆಯನ್ನು ಎತ್ತಿನಹೊಳೆ ಕಾಮಗಾರಿಗಾಗಿ ಅಗೆಯಲಾಗಿದೆ. ಕೆರೆ ನೀರಿನ ತೇವಾಂಶದಿಂದಾಗಿ ಅನೇಕ ಬಾರಿ ಡಾಂಬರು ಹಾಕಿದರು ಸುಧಾರಣೆಗೊಂಡಿಲ್ಲ. ಶೆಟ್ಟಿಕೆರೆಯಿಂದ ಬಾಚಿಹಳ್ಳಿಯವರೆಗೆ ಹೊಸ ರಸ್ತೆ ನಿರ್ಮಿಸುವುದು ಸೂಕ್ತ.
ತೇಜು, ಶೆಟ್ಟಿಕೆರೆ
ಶೆಟ್ಟಿಕೆರೆ ಮಾರ್ಗದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಿದರೆ ಎಷ್ಟೋ ಜೀವಗಳ ಉಳಿಸಿದಂತಾಗುತ್ತದೆ. ಈ ಮಾರ್ಗದಲ್ಲಿ ಸಂಚಾರಿಸುವ ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದಿದ್ದಾರೆ. ಈ ಬಗ್ಗೆ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು.
ಮಂಜುನಾಥ್, ಪ್ರಾವಿಜನ್ ಸ್ಟೋರ್
ಶೆಟ್ಟಿಕೆರೆ ರಸ್ತೆಯ ತುಂಬಾ ಗುಂಡಿಗಳಾಗಿ ಸಂಚರಿಸಲು ಆಗದ ಸ್ಥಿತಿ ತಲುಪಿದೆ. ಮಾತಾ ಗಾರ್ಮೆಂಟ್ಸ್ ಹಂಪ್ಸ್‌ ಬಳಿಯ ಗುಂಡಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.
ವಸಂತ್, ಕೋಡಿಪಾಳ್ಯ
ಪ್ರತಿದಿನ ನೂರಾರು ವಿದ್ಯಾರ್ಥಿಗಳು ಕುಪ್ಪೂರು ನವಿಲೇ ಮಾರ್ಗವಾಗಿ ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ಈ ಗುಂಡಿ ಬಿದ್ದ ರಸ್ತೆಗಳಿಂದಾಗಿ ಅನಾಹುತವಾದರೆ ಅದಕ್ಕೆ ಯಾರು ಹೊಣೆ? ವಾಹನಗಳು ಬೇಗನೆ ದುರಸ್ತಿಗೆ ಬರುವುದರಿಂದ ಆರ್ಥಿಕ ಹೊರೆಯಾಗುತ್ತಿದೆ
ದಯಾನಂದ್, ಮೇಲನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.