ADVERTISEMENT

ಪೆಂಟಾವಲೆಂಟ್‌ ಲಸಿಕೆ ಪಡೆದ ಮಗು ಸಾವು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 16:03 IST
Last Updated 8 ಮಾರ್ಚ್ 2025, 16:03 IST

ತುಮಕೂರು: ಶಿರಾ ತಾಲ್ಲೂಕಿನ ಮಾಗೋಡು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಪೆಂಟಾವಲೆಂಟ್ ಲಸಿಕೆ ಪಡೆದ ನಂತರ ಮಗುವೊಂದು ಮೃತಪಟ್ಟಿದೆ. ಲಸಿಕೆಯಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಕೀರ್ತನಾ ಮತ್ತು ಲಕ್ಷ್ಮಿಕಾಂತ್‌ ದಂಪತಿಯ ಐದು ತಿಂಗಳ ಮಗುವಿಗೆ ಪೆಂಟಾವಲೆಂಟ್ ಲಸಿಕೆ ಹಾಕಿಸಲಾಗಿತ್ತು. ಮಧ್ಯಾಹ್ನದ ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಶಿರಾ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಪರೀಕ್ಷೆ ನಡೆಸಿ ಮಗುವನ್ನು ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು.

ಗುರುವಾರ ರಾತ್ರಿ ನಗರದ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಮಗು ಮಧ್ಯರಾತ್ರಿ ಸಾವನ್ನಪ್ಪಿದೆ. ಶುಕ್ರವಾರ ಸಂಜೆ ಮಗುವಿನ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಮರಣೋತ್ತರ ಪರೀಕ್ಷೆಯ ನಂತರ ಶನಿವಾರ ಮಗುವಿನ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

ADVERTISEMENT

‘ಒಂದು ಡೋಸ್‌ನಲ್ಲಿ ಆರು ಜನರಿಗೆ ಲಸಿಕೆ ನೀಡಲಾಗಿದೆ. ಅದರಲ್ಲಿ ಒಂದು ಮಗುವಿಗೆ ವಾಂತಿ,ಭೇದಿಯಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಎಫ್‌ಎಸ್‌ಎಲ್‌ ವರದಿ ಬಂದ ನಂತರ ಖಚಿತ ಮಾಹಿತಿ ಸಿಗಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎಂ.ಚಂದ್ರಶೇಖರ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.