ADVERTISEMENT

ಶಾಲೆಯಲ್ಲಿ ಮಕ್ಕಳ ಕಲರವ

20 ತಿಂಗಳ ನಂತರ ಪುನರಾರಂಭ: ಕೋವಿಡ್‌ ಮಾರ್ಗಸೂಚಿ ಪಾಲನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 4:53 IST
Last Updated 26 ಅಕ್ಟೋಬರ್ 2021, 4:53 IST
ತುಮಕೂರಿನಲ್ಲಿ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಸ್ವಾಗತಿಸಿದರು
ತುಮಕೂರಿನಲ್ಲಿ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಸ್ವಾಗತಿಸಿದರು   

ತುಮಕೂರು: ಮಕ್ಕಳಲ್ಲಿ ಉತ್ಸಾಹ ಎದ್ದು ಕಾಣುತ್ತಿತ್ತು. ತಮ್ಮ ನೆಚ್ಚಿನ ಶಿಕ್ಷಕರನ್ನು ಕಂಡ ಕೂಡಲೇ ಮುಖ ಅರಳಿಸಿಕೊಂಡರು. ಸ್ನೇಹಿತರನ್ನು ನೋಡಿ ಅಪ್ಪಿಕೊಂಡರು.

ಕೋವಿಡ್‌ನಿಂದಾಗಿ ಶಾಲೆಗಳು ಮುಚ್ಚಿದ ಒಂದೂವರೆ ವರ್ಷದ ನಂತರ ಸೋಮವಾರ ತರಗತಿ ಆರಂಭವಾಗಿದ್ದು, ನಗರ ಹಾಗೂ ಜಿಲ್ಲೆಯಲ್ಲಿ 1ರಿಂದ 5ನೇ ತರಗತಿ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಿದರು. ಮನೆಯಲ್ಲೇ ರಜೆ ಕಳೆದು, ಆನ್‌ಲೈನ್ಪಾಠ ಕೇಳಿ ಬೇಸರಗೊಂಡಿದ್ದ ಚಿಣ್ಣರ ಮುಖದಲ್ಲಿ ನಗುವಿನ ಬೆಳ್ಳಿ ಗೆರೆ ಮೂಡಿತ್ತು. ಪೋಷಕರೂ ಸಹ ಅಷ್ಟೇ ಆಸಕ್ತಿಯಿಂದ ಮಕ್ಕಳನ್ನು ಕಳುಹಿಸಿಕೊಟ್ಟರು. ಕಲಿಕೆಯಲ್ಲಿ ಹಿಂದೆ ಉಳಿದಿದ್ದ ಮಕ್ಕಳು ಈಗ ನಾಲ್ಕು ಅಕ್ಷರ ಕಲಿಯುವಂತಾಯಿತಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ ಮಕ್ಕಳ ಆಹ್ವಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶಿಕ್ಷಕರು ಸಹ ಆತ್ಮೀಯವಾಗಿ ಬರಮಾಡಿಕೊಂಡರು. ಕೆಲವೆಡೆ ಹೂವು ಕೊಟ್ಟು ಸ್ವಾಗತಿಸಿದರೆ, ಇನ್ನೂ ಕೆಲವೆಡೆ ಸಿಹಿ, ಚಾಕೋಲೆಟ್‌ಗಳನ್ನು ನೀಡಿ ಬರಮಾಡಿಕೊಂಡರು.

ADVERTISEMENT

ಹಲವೆಡೆ ಹೂ ಮಳೆಗರೆದು ಪ್ರೋತ್ಸಾಹಿಸಿದರು. ಒಟ್ಟಾರೆಯಾಗಿ ಮಕ್ಕಳು ಖುಷಿಯಿಂದ ಶಾಲೆಗಳಿಗೆ ಬಂದರು. ಆರಂಭದ ಮೊದಲ ದಿನವಾಗಿದ್ದು, ಹೆಚ್ಚಿನ ಶಾಲೆಗಳಲ್ಲಿ ಪಾಠ ಪ್ರವಚನಕ್ಕಿಂತ ಮಕ್ಕಳುಖುಷಿಯಿಂದ ಓಡಾಡಿ, ಆಟ ಆಡಿಕೊಂಡು ಇರಲು ಬಿಟ್ಟರು. ಶಾಲೆಗೆ ಹೊಂದಿಕೊಳ್ಳುವಂತಹ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನದಲ್ಲಿ ಶಿಕ್ಷಕರು ತೊಡಗಿಸಿಕೊಂಡಿದ್ದರು.

ಶಾಲಾ ಕೊಠಡಿಗಳಲ್ಲಿ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಪುಟಾಣಿಗಳು ಕುಳಿತಿದ್ದರು. 20 ತಿಂಗಳ ನಂತರ ಶಾಲಾ ಸಮವಸ್ತ್ರ ಧರಿಸಿದರು. ಶಾಲೆಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಖುಷಿಯೂ ಎದ್ದು ಕಾಣುತ್ತಿತ್ತು. ಶಾಲೆಗೆ ತೆರಳುವ ಮುನ್ನ ಪೋಷಕರೊಂದಿಗೆ ಅಂಗಡಿಗಳಿಗೆ ತೆರಳಿ ಸ್ಯಾನಿಟೈಸರ್ ಖರೀದಿಸಿದ ದೃಶ್ಯಗಳು ಕಂಡು ಬಂದವು.

ಒಂದು ಕೊಠಡಿಯಲ್ಲಿ 15ರಿಂದ 20ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ಮಕ್ಕಳ ಸಂಖ್ಯೆ ಹೆಚ್ಚಿದ್ದು, ಕೊಠಡಿ ಸಂಖ್ಯೆ ಕೊರತೆಯಾದರೆ ಪಾಳಿಯಲ್ಲಿ ತರಗತಿ ನಡೆಸಲಾಗುತ್ತದೆ. ಪೋಷಕರ ಒಪ್ಪಿಗೆ ಪತ್ರ ಪಡೆದು ಶಾಲೆಗೆ ಪ್ರವೇಶ ನೀಡಲಾಗಿದೆ. ಮೊದಲ ದಿನವಾದ್ದರಿಂದ ಪೂರ್ಣ ಪ್ರಮಾಣದಲ್ಲಿ ಹಾಜರಾತಿ ಇರಲಿಲ್ಲ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಶಿಕ್ಷಕರು ಹೇಳುತ್ತಾರೆ.

‘1ರಿಂದ 5ನೇ ತರಗತಿ ಮಕ್ಕಳಿಗೆ ಬೆಳಿಗ್ಗೆಯಿಂದ ಮಧ್ಯಾಹ್ನ 1 ಗಂಟೆ ವರೆಗೂ ತರಗತಿ ನಡೆಸಲಾಯಿತು. ಉಳಿದ ಮಕ್ಕಳಿಗೆ ಸಂಜೆವರೆಗೂ ತರಗತಿ ನಡೆಯುತ್ತಿವೆ. 5ರಿಂದ 10ನೇ ತರಗತಿ ಮಕ್ಕಳಿಗೆ ಮಾತ್ರ ಬಿಸಿಯೂಟ ನೀಡಲಾಗುತ್ತಿದೆ. ಪ್ರಾಥಮಿಕ ಶಾಲೆ ಮಕ್ಕಳಿಗೆ ನ. 2ರ ನಂತರ ಬಿಸಿಯೂಟ ನೀಡಲಾಗುತ್ತದೆ’ ಎಂದು ಡಿಡಿಪಿಐ ಸಿ. ನಂಜಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.