ADVERTISEMENT

ತುಮಕೂರು | ಸೀಲ್‌ಡೌನ್‌ಗೆ ಪೌರಕಾರ್ಮಿಕರ ಬಳಕೆ; ಆಕ್ರೋಶ

ನಗರದ ಸ್ವಚ್ಛತಾ ಕಾರ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ; ಸುರಕ್ಷೆ ಇಲ್ಲದೆ ಕೆಲಸ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 16:27 IST
Last Updated 30 ಜುಲೈ 2020, 16:27 IST
ಪೌರಕಾರ್ಮಿಕ ಸ್ನಾನಕ್ಕೆ ಬನಶಂಕರಿಯಲ್ಲಿ ನಿರ್ಮಿಸಿರುವ ಶೌಚಾಲಯ ಬಾಗಿಲು ಹಾಕಿರುವುದು
ಪೌರಕಾರ್ಮಿಕ ಸ್ನಾನಕ್ಕೆ ಬನಶಂಕರಿಯಲ್ಲಿ ನಿರ್ಮಿಸಿರುವ ಶೌಚಾಲಯ ಬಾಗಿಲು ಹಾಕಿರುವುದು   

ತುಮಕೂರು: ಕೊರೊನಾ ಸೋಂಕಿತರ ಮನೆಗಳು, ರಸ್ತೆಗಳ ಸೀಲ್‌ಡೌನ್‌ಗೆ ಪೌರಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದು ಇದು ಈಗ ಆ ಸಂಘಟನೆಗಳ ಮುಖಂಡರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದರೆ, ಪೌರಕಾರ್ಮಿಕರಲ್ಲಿ ಆತಂಕವನ್ನು ಮೂಡಿಸಿದೆ.

ನಗರದಲ್ಲಿ ಈಗಾಗಲೇ ಇಬ್ಬರು ಪೌರ ಕಾರ್ಮಿಕರಿಗೆ ಸೋಂಕು ತಗುಲಿದೆ. ಹೀಗೆ ಪೌರಕಾರ್ಮಿಕರಿಗೆ ಸೋಂಕು ತಗುಲಿದರೆ ಅವರ ಜತೆ ಕೆಲಸ ಮಾಡಿದ ಇತರೆ ಪೌರಕಾರ್ಮಿಕರು ಮತ್ತು ಕುಟುಂಬದವರನ್ನು ಕ್ವಾರಂಟೈನ್‌ನಲ್ಲಿ ಇರಿಸಬೇಕಾಗುತ್ತದೆ. ಹೀಗೆ ಪೌರ ಕಾರ್ಮಿಕರಿಗೆ ಸೋಂಕು ತಗುಲಿದರೆ ಇಲ್ಲವೆ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಿದರೆ ನಗರದ ಸ್ವಚ್ಛತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪೌರಕಾರ್ಮಿಕರನ್ನು ಸ್ವಚ್ಛತಾ ಕೆಲಸಗಳಿಗೆ ಮಾತ್ರ ಬಳಸಬೇಕು. ಸೀಲ್‌ಡೌನ್‌ ಕೆಲಸಕ್ಕೆ ನಿಯೋಜಿಸಬಾರದು ಎಂದು ಪೌರಕಾರ್ಮಿಕ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಸುರಕ್ಷೆ ಇಲ್ಲ: ಸೀಲ್‌ಡೌನ್ ಮಾಡುವ ಮನೆಗಳ ಬಳಿ ಔಷಧಿ ಸಿಂಪಡಣೆ, ಶೀಟ್‌ಗಳನ್ನು ತರುವುದು, ಅಳವಡಿಸುವುದು– ಹೀಗೆ ಬಹುತೇಕ ಕೆಲಸಗಳನ್ನು ಪೌರಕಾರ್ಮಿಕರು ನಿರ್ವಹಿಸುತ್ತಾರೆ.

ADVERTISEMENT

ತಿಪಟೂರಿನಲ್ಲಿ ಕ್ವಾರಂಟೈನ್ ಕೇಂದ್ರ ಸ್ವಚ್ಛತೆ, ನಿರ್ವಹಣೆಯಲ್ಲಿ ತೊಡಗಿದ್ದ ಪೌರಕಾರ್ಮಿಕರೊಬ್ಬರಿಗೆ ಯಾವುದೇ ಸುರಕ್ಷಾ ಸಾಧನಗಳನ್ನು ನೀಡದ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ತಗುಲಿತ್ತು. ಆಗಲೇ ಜಿಲ್ಲಾ ಮಟ್ಟದಲ್ಲಿ ಪೌರಕಾರ್ಮಿಕ ಸಂಘಟನೆಗಳ ಸದಸ್ಯರು ಸೀಲ್‌ಡೌನ್ ಸೇರಿದಂತೆ ಕೊರೊನಾ ಕೆಲಸಗಳಿಗೆ ಬಳಸಿಕೊಳ್ಳಬಾರದು. ಒಂದು ವೇಳೆ ಬಳಸಿಕೊಂಡರೆ ಸುರಕ್ಷಾ ಸಾಧನಗಳನ್ನು ನೀಡುವಂತೆ ಒತ್ತಾಯಿಸಿದ್ದರು.

ಗುತ್ತಿಗೆ, ಕಾಯಂ ಸೇರಿದಂತೆ 300 ಪೌರಕಾರ್ಮಿಕರು ನಗರದ ಸ್ವಚ್ಛತೆಗೆ ದುಡಿಯುತ್ತಿದ್ದಾರೆ. ಇಂದಿಗೂ ಕಸವಿಲೇವಾರಿ, ಸಂಗ್ರಹದ ಕಾರಣಕ್ಕೆ ಜನಸಮುದಾಯದ ಜತೆ ಹೆಚ್ಚು ನಿಕಟ ಸಂ‍ಪರ್ಕವನ್ನು ಇಟ್ಟುಕೊಂಡಿದ್ದಾರೆ. ನಗರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರನ್ನು ಕೊರೊನಾ ಕೆಲಸಗಳಿಗೆ ಬಳಸಿಕೊಳ್ಳಬಾರದು ಎನ್ನುವ ಆಗ್ರಹ ವ್ಯಕ್ತವಾಗಿದೆ.

ಸ್ನಾನಕ್ಕೆ ಸೌಲಭ್ಯವಿಲ್ಲ: ನಗರದ ಶೆಟ್ಟಿಹಳ್ಳಿಯ ಅಂಗನವಾಡಿ, ಬನಶಂಕರಿಯಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಮುಗಿಸದ ನಂತರ ಸ್ನಾನ ಮಾಡಲು ಶೌಚಾಲಯ ನಿರ್ಮಿಸಲಾಗಿದೆ. ಆದರೆ ಆ ಶೌಚಾಲಯಗಳು ಬಳಕೆಗೆ ಮುಕ್ತವಾಗಿಲ್ಲ.

ಗ್ಲೌಸ್ ಸಹ ನೀಡಲಿಲ್ಲ

ಅಧಿಕಾರಿಗಳು ಹೇಳಿದಂತೆ ನಾವು ಕೇಳಲೇಬೇಕು. ಇಲ್ಲದಿದ್ದರೆ ಕೆಲಸಕ್ಕೆ ಕುತ್ತು ಬರಬಹುದು. ನಾನೂ ಸಹ ಎರಡು ಮೂರು ಕಡೆಗಳಲ್ಲಿ ಸೀಲ್‌ಡೌನ್ ಕೆಲಸಗಳನ್ನು ಮಾಡಿದ್ದೇನೆ. ಆ ಮನೆಗೆ ಹೋಗುವಾಗ ನಮಗೆ ಯಾವುದೇ ಗ್ಲೌಸ್ ಸಹ ಕೊಡುವುದಿಲ್ಲ. ನಾವೇ ಶೀಟ್‌ಗಳನ್ನು ಬಳಸಿ ಮನೆಯ ಸುತ್ತ ತಡೆಗೋಡೆ ನಿರ್ಮಿಸಬೇಕು ಎನ್ನುತ್ತಾರೆ ಗುತ್ತಿಗೆ ಪೌರಕಾರ್ಮಿಕರೊಬ್ಬರು.

ಹಳಿ ತಪ್ಪಲಿದೆ ಸ್ವಚ್ಛತಾ ಕಾರ್ಯ

ನಗರದ ಜನಸಂಖ್ಯೆಗೆ ತಕ್ಕಂತೆ ಪೌರಕಾರ್ಮಿಕರು ಇಲ್ಲ. ಬಹುತೇಕ ಕಾರ್ಮಿಕರನ್ನು ಸೀಲ್‌ಡೌನ್ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ ನಗರದಲ್ಲಿ ಕಸ ವಿಲೇವಾರಿ, ಸಂಗ್ರಹ ನಡೆಸಿ ಸಂಜೆ ಎಷ್ಟೇ ಸಮಯವಾದರೂ ಸೀಲ್‌ಡೌನ್ ಕೆಲಸ ಮುಗಿಸಿಯೇ ಮನೆಗಳಿಗೆ ತೆರಳಬೇಕು ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಪೌರಕಾರ್ಮಿಕ ಸಂಘಟನೆ ಮುಖಂಡ ಸೈಯದ್ ಮುಜೀಬ್ ತಿಳಿಸಿದರು.

ಕ್ಯಾತ್ಸಂದ್ರದ ಕೋವಿಡ್ ಕೇರ್ ಸೆಂಟರ್‌ ಸ್ವಚ್ಛತೆಗೆ ಒಬ್ಬ ಪೌರಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ. ಅವರಿಗೆ ಪಿಇಪಿ ಕಿಟ್ ನೀಡಲಾಗುತ್ತದೆ. ಅವರು ಅಲ್ಲಿ ಕೆಲಸ ನಿರ್ವಹಿಸಿ ಮತ್ತೆ ಬಡಾವಣೆಗಳಿಗೆ ಬಂದು ಕಸ ಸಂಗ್ರಹದಲ್ಲಿ ತೊಡಗಬೇಕು. ಹೀಗೆ ಮಾಡುವುದು ಸರಿಯಲ್ಲ. ಅವರನ್ನು ಆ ಕೇಂದ್ರದ ಕೆಲಸಕ್ಕೆ ಬಳಸಿಕೊಳ್ಳಲಿ. ಮತ್ತೆ ಅವರನ್ನು ಸಂಗ್ರಹಕ್ಕೆ ಕಳುಹಿಸಬಾರದು ಎಂದು ಆಗ್ರಹಿಸಿದರು.

ಮಾನಂಗಿಯಲ್ಲಿ ಕೆಲವರಿಗೆ ಸೋಂಕು ತಗುಲಿದೆ. ಆ ಗ್ರಾಮದಿಂದಲೇ 30 ಜನರು ಕಸದ ಗಾಡಿಗೆ ಕೆಲಸಕ್ಕೆ ಬರುತ್ತಾರೆ. ಅವರನ್ನೂ ಕ್ವಾರಂಟೈನ್ ಮಾಡಬೇಕು ಎನ್ನುವ ಆಗ್ರಹ ವ್ಯಕ್ತವಾಗಿತ್ತು. ಹೀಗೆ ಮಾಡಿದರೆ ಕನಿಷ್ಠ 10ಕ್ಕೂ ಹೆಚ್ಚು ಕಸ ಸಂಗ್ರಹ ವಾಹನಗಳು ನಿಲುಗಡೆ ಆಗಬೇಕಾಗುತ್ತದೆ. ಆದ್ದರಿಂದ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ಹೆಜ್ಜೆ ಇಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.