ಕುಣಿಗಲ್: ಪಟ್ಟಣದ ಹೃದಯ ಭಾಗದಲ್ಲಿದ್ದ ತಾಲ್ಲೂಕು ಪಂಚಾಯಿತಿಯ ಕೊಟ್ಯಂತರ ಮೌಲ್ಯದ ಜಾಗವನ್ನು ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದು, ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
ಪಟ್ಟಣದ ಮದ್ದೂರು ರಸ್ತೆ ರಾಘವೇಂದ್ರ ಸ್ವಾಮಿ ಮಠದ ಪಕ್ಕದಲ್ಲಿ ತಾಲ್ಲೂಕು ಪಂಚಾಯಿತಿಗೆ ಸೇರಿದ ಜಾಗವಿದ್ದು, ಮೊದಲಿಗೆ ಸಿಡಿಪಿಒ ಮತ್ತು ಜಿಲ್ಲಾ ಪಂಚಾಯಿತಿ ಎಂಜನಿಯರಿಂಗ್ ವಿಭಾಗದ ಕಚೇರಿ ಸೇರಿದಂತೆ ವಾಣಿಜ್ಯ ಮಳಿಗೆಗಳು ಇದ್ದವು.
2005ರಲ್ಲಿ ರಸ್ತೆ ಅಭಿವೃದ್ಧಿಯ ನೆಪದಲ್ಲಿ ಮಳಿಗೆಗಳನ್ನು ತೆರವು ಮಾಡಲಾಗಿದ್ದರೂ ಮತ್ತೆ ಮಳಿಗೆ ನಿರ್ಮಾಣ ಮಾಡದ ಕಾರಣ ಅನಧಿಕೃತ ಪೆಟ್ಟಿ ಅಂಗಡಿಗಳು ಪ್ರಾರಂಭವಾಗಿ ಪ್ರಭಾವಿ ಸದಸ್ಯರುಗಳ ಪೆಟ್ಟಿಗೆ ಅಂಗಡಿ ಮಾಲೀಕರಿಂದ ಬಾಡಿಗೆಯನ್ನು ಸಹ ವಸೂಲಿಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಸಂಬಂಧಪಟ್ಟವರು ಯಾರು ತಲೆಕೆಡಿಸಿಕೊಳ್ಳದ ಕಾರಣ ಪರಿಸ್ಥಿತಿ ಮುಂದುವರೆದಿತ್ತು.
ಇತ್ತೀಚೆಗೆ ನೂತನ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಾಲ್ಲೂಕಿಗೆ ಭೇಟಿ ನೀಡಿದ ಸಮಯದಲ್ಲಿ ಸಾರ್ವಜನಿಕ ಅಸ್ತಿ ಸಂರಕ್ಷಿಸುವ ವಿಚಾರ ಪ್ರಸ್ತಾಪವಾದಾಗ ಮಾಧ್ಯಮ ಪ್ರತಿನಿಧಿಗಳು ತಾಲ್ಲೂಕು ಪಂಚಾಯಿತಿ ಜಾಗದ ಬಗ್ಗೆ ಗಮನ ಸೆಳೆದಿದ್ದರೂ, ನಂತರದ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್ ಗಮನ ಹರಿಸಿದ ಪರಿಣಾಮ ಬುಧವಾರದಿಂದ ಪೆಟ್ಟಿ ಅಂಗಡಿಗಳ ತೆರವಿನ ಕಾರ್ಯ ನಡೆಯುತ್ತಿದ್ದು, ಇಡೀ ಜಾಗವನ್ನು ವಶಕ್ಕೆ ಪಡೆದು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತಾಲ್ಲೂಕು ಪಂಚಾಯಿತಿ ಜಾಗದಲ್ಲಿನ ಅನಧಿಕೃತ ಪೆಟ್ಟಿ ಅಂಗಡಿಗಳ ತೆರವಿನ ಕಾರ್ಯ ನಡೆಯುತ್ತಿದ್ದೆ. ಪುರಸಭೆ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ಅತಿಕ್ರಮಿಸಿ ನಿರ್ಮಿಸಿಕೊಂಡಿರುವ ಪೆಟ್ಟಿ ಅಂಗಡಿಗಳ ತೆರವು ಯಾವಾಗ ಎನ್ನುವುದು ಸ್ಥಳೀಯರ ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.