ADVERTISEMENT

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ; ಜನರಿಗೆ ಅನುಕೂಲವಿಲ್ಲ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 12:17 IST
Last Updated 13 ಜೂನ್ 2019, 12:17 IST
ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಸೋದೇನಹಳ್ಳಿ ಗ್ರಾಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದ ಅಂಜಮ್ಮ ಎಂಬುವರ ಮನೆಗೆ ಗುರುವಾರ ಬಿಜೆಪಿ ಮುಖಂಡರು ಭೇಟಿ ನೀಡಿದ್ದರು
ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಸೋದೇನಹಳ್ಳಿ ಗ್ರಾಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದ ಅಂಜಮ್ಮ ಎಂಬುವರ ಮನೆಗೆ ಗುರುವಾರ ಬಿಜೆಪಿ ಮುಖಂಡರು ಭೇಟಿ ನೀಡಿದ್ದರು   

ಮಧುಗಿರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯದಿಂದ ಜನರಿಗೆ ಯಾವುದೇ ಅನುಕೂಲವಿಲ್ಲ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ತಿಳಿಸಿದರು.

ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಸೋದೇನಹಳ್ಳಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದ ಅಂಜಮ್ಮ ಎಂಬುವರ ಮನೆಗೆ ಗುರುವಾರ ಭೇಟಿ ನೀಡಿ ಮಾತನಾಡಿದರು.

2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸೋದೇನಹಳ್ಳಿಯ ಅಂಜಮ್ಮ ಅವರ ಮನೆಯಲ್ಲಿ ಊಟ ಮಾಡಿ, ಶಾಲೆಯಲ್ಲಿ ಮಲಗಿರುವುದು ಬಿಟ್ಟರೆ ಜನತೆಗೆ ಯಾವುದೇ ಪ್ರಯೋಜನವಾಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಕೆರೆಗಳಿಗೆ ನೀರು ಹರಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರ, ರಸ್ತೆ, ಚರಂಡಿ, ಕಾಲೇಜು ಮಂಜೂರಾತಿ ಮಾಡಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ಜನರಿಗೆ ನೀಡಿದ್ದ ಭರವಸೆ, ಭರವಸೆಯಾಗಿಯೇ ಉಳಿದಿದೆ. ಅಂಜಮ್ಮ ಮನೆಯಲ್ಲಿ ಊಟ ಸವಿದ ಮುಖ್ಯಮಂತ್ರಿ ಕೃತಜ್ಞತಾ ಪತ್ರವನ್ನು ಕೂಡ ಕಳುಹಿಸಿಲ್ಲ ದೂರಿದರು.

ADVERTISEMENT

ವಾಸ್ತವ್ಯದಿಂದ ಗ್ರಾಮದ ಸಣ್ಣ- ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ ಎಂದರೆ ಏತಕ್ಕೆ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡಬೇಕೆಂದು ಪ್ರಶ್ನಿಸಿದರು. ಈ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದರು. ಆದರೆ, ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ನಿತ್ಯ ಜನರು ಎರಡು ಕಿ.ಮೀ. ನಡೆಯಬೇಕಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಆರ್.ಹುಲಿನಾಯ್ಕರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ರಮೇಶ್ ರೆಡ್ಡಿ, ಕಾರ್ಯದರ್ಶಿ ಜಯಣ್ಣ, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಮೋಹನ್, ಬಿಜೆಪಿ ಮುಖಂಡರಾದ ಹೆಬ್ಬಾಕ ರವಿ, ಸುರೇಶ್, ಪ್ರಸನ್ನಕುಮಾರ್, ಸೀತಾರಾಮು, ದೀಕ್ಷಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.