ADVERTISEMENT

ತುಮಕೂರು: ಮಕ್ಕಳೊಂದಿಗೆ ಮುಖ್ಯಮಂತ್ರಿ ಸಂವಾದ

ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ l ಮಕ್ಕಳ ಬೇಡಿಕೆಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:16 IST
Last Updated 17 ಮೇ 2022, 4:16 IST
ತುಮಕೂರಿನಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಜ್ಯೋತಿ ಗಣೇಶ್ ಇದ್ದಾರೆ
ತುಮಕೂರಿನಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಜ್ಯೋತಿ ಗಣೇಶ್ ಇದ್ದಾರೆ   

ತುಮಕೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದ ಎಂಪ್ರೆಸ್ ಶಾಲೆಯಲ್ಲಿ ಸೋಮವಾರ ಚಾಲನೆ ನೀಡುವ ಮೂಲಕ ರಾಜ್ಯದಲ್ಲಿ ಶಾಲಾ ಚಟುವಟಿಕೆಗಳು ಪ್ರಾರಂಭವಾದವು.

ಪ್ರಮುಖವಾಗಿ ಮಕ್ಕಳ ಜತೆಗೆ ಸಂವಾದ ನಡೆಸಿ, ಅವರ ಬೇಕು, ಬೇಡಗಳಿಗೆ ಸ್ಪಂದಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಾವಧಾನದಿಂದಲೇ ಉತ್ತರ ನೀಡಿ, ಬೇಡಿಕೆ ಈಡೇರಿಸುವ ಭರವಸೆ ಕೊಟ್ಟರು. ತಾವು ಮಾತನಾಡಿದ್ದಕ್ಕಿಂತ ಮಕ್ಕಳಿಂದ ಬಂದ ಬೇಡಿಕೆಗೆ ಸ್ಪಂದಿಸುವ ಪ್ರಯತ್ನ ಮಾಡಿದರು.

ವಿದ್ಯಾರ್ಥಿ ರಶ್ಮಿತಾ, ಕ್ರೀಡಾ ಸಾಮಗ್ರಿಗಳಿಗೆ ಬೇಡಿಕೆ ಸಲ್ಲಿಸಿದರೆ, ತೊಂಡೆಗೆರೆ ಶಾಲೆಯ ರಾಕೇಶ್, ಮಧ್ಯಾಹ್ನದ ಬಿಸಿ ಊಟದಲ್ಲಿ ಪೌಷ್ಟಿಕಾಂಶ ಹೆಚ್ಚಿಸುವಂತೆ ಕೇಳಿಕೊಂಡರು. ಬೆಳ್ಳಾವಿ ಶಾಲೆಯ ಅಮೂಲ್ಯ ಬೈಸಿಕಲ್‌ ಬೇಕೆಂದು ಕೇಳಿಕೊಂಡು, ಬೇಡಿಕೆ ಈಡೇರಿಸಿಕೊಂಡರು. ಚಿಕ್ಕಹಳ್ಳಿ ಶಾಲೆಯ ಸಿ.ಎಸ್. ಭರತ್, ಶಾಲಾ ಕೊಠಡಿ ನಿರ್ಮಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 6,500 ಕೊಠಡಿ ನಿರ್ಮಿಸುವ ಭರವಸೆ ಕೊಟ್ಟರು.

ADVERTISEMENT

ಕೋವಿಡ್‌ನಿಂದ ತಂದೆ– ತಾಯಿ ಕಳೆದುಕೊಂಡಿರುವ ಚೈತನ್ಯ ಮುಂದೆ ವೈದ್ಯೆಯಾಗುವ ಭಯಕೆ ವ್ಯಕ್ತಪಡಿಸಿದರು.

ಬೊಮ್ಮಾಯಿ, ‘ಕಳೆದ ವರ್ಷ 8 ಲಕ್ಷ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದು, ಈ ಸಾಲಿನಲ್ಲಿ 14 ಲಕ್ಷ ಮಕ್ಕಳಿಗೆ ಸೌಲಭ್ಯ ಸಿಗಲಿದೆ’ ಎಂದರು.

ಕ್ಯಾತ್ಸಂದ್ರ ಶಾಲೆಯ ಬಿಂದು, ಪಠ್ಯೇತರ ಚಟುವಟಿಕೆಗೆ ಅಗತ್ಯ ಫೈಲ್‌ಗೆ ಬೇಡಿಕೆ ಸಲ್ಲಿಸಿದರು. ಬಡ ಮಕ್ಕಳಿಗೆ ಕೊಡುವುದಾಗಿ ಮುಖ್ಯಮಂತ್ರಿ ಹೇಳಿದರು.

ಜ್ಯೋತಿ, ಜಿಲ್ಲಾ ದರ್ಶನಕ್ಕೆ (ಪ್ರವಾಸ); ಲಿಖಿತ, ಶುಚಿತ್ವದ ಪ್ಯಾಡ್; ಚಿರಂಜೀವಿ, ಚಿಕ್ಕ ಮಕ್ಕಳಿಗೆ ಕೋವಿಡ್ ಲಸಿಕೆ; ಲಕ್ಷ್ಮಿ, ವಿಶ್ರಾಂತಿ ಕೊಠಡಿ; ಯಶಸ್ವಿನಿ, ಗುರುತಿನ ಕಾರ್ಡ್‌ಗೆ ಮನವಿ ಮಾಡಿದರು.

‘ನಾನೂ ಸಹ ಬಸವೇಶ್ವರ ದೇಗುಲದಲ್ಲಿ ನಡೆಯುತ್ತಿದ್ದ ಅಂಗನವಾಡಿಯಲ್ಲಿ ಕುಳಿತು ಅಕ್ಷರ ಕಲಿತಿದ್ದೇನೆ. ಹಿಂದೆ ಗುರುವೊಬ್ಬರೇ ಆಧಾರವಾಗಿದ್ದರು. ಆಗ ಜ್ಞಾನವಿತ್ತು. ಈಗ ತಂತ್ರಜ್ಞಾನ ಸೇರಿಕೊಂಡಿದೆ. ಜ್ಞಾನ ಹಾಗೂ ತಂತ್ರಜ್ಞಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ಕಲಿಕೆ ಸುಲಭವಾಗಲಿದೆ’ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ‘ಕೋವಿಡ್ ಸಮಯದಲ್ಲಿ ಮಕ್ಕಳುಶಿಕ್ಷಣದಿಂದ ವಂಚಿತರಾಗಿದ್ದು, ಈ ಬಾರಿ ಕಲಿಕೆ ಗುಣಮಟ್ಟ ಹೆಚ್ಚಿಸಲು ಕ್ರಮ ವಹಿಸಲಾಗಿದೆ. 1ರಿಂದ 3ನೇ ತರಗತಿ ಮಕ್ಕಳಿಗೆ ‘ವಿದ್ಯಾ ಪ್ರವೇಶ’ ಕಾರ್ಯಕ್ರಮದ ಮೂಲಕ ಮೊದಲ ಮೂರು ತಿಂಗಳು ಆರಂಭಿಕ ಶಿಕ್ಷಣ ಕೊಡಲಾಗುವುದು. 4ರಿಂದ 9ನೇ ತರಗತಿ ಮಕ್ಕಳಿಗೂ 15 ದಿನಗಳ ಕಾಲ ಹಿಂದಿನ ಸಾಲಿನ ಪಠ್ಯವನ್ನು ಅರ್ಥ ಮಾಡಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿ ಗಣೇಶ್, ಚಿದಾನಂದಗೌಡ, ವೈ.ಎ. ನಾರಾಯಣಸ್ವಾಮಿ, ರೇಷ್ಮೆ ಉದ್ಯಮ ನಿಗಮ ಅಧ್ಯಕ್ಷ ಎಸ್.ಆರ್. ಗೌಡ, ಮೇಯರ್ ಬಿ.ಜಿ. ಕೃಷ್ಣಪ್ಪ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿ.ಪಂ ಸಿಇಒ ಕೆ. ವಿದ್ಯಾಕುಮಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.