ADVERTISEMENT

‘ಮೀಸಲಾತಿಗಾಗಿ ಸಮುದಾಯ ಒಗ್ಗಟ್ಟಾಗಬೇಕು’

ಕೋರದಲ್ಲಿ ಜನಜಾಗೃತಿ ಸಭೆ; ರಾಜ್ಯದ ವಿವಿಧ ಭಾಗಗಳಿಂದ ಬಂದ ಕುರುಬ ಸಮುದಾಯವರು ಭಾಗಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 2:14 IST
Last Updated 31 ಜನವರಿ 2021, 2:14 IST
ಕುರುಬ ಸಮುದಾಯದ ಪಾದಯಾತ್ರೆ ತುಮಕೂರಿಗೆ ಬಂದಾಗ ಕಲಾವಿದರು ಸ್ವಾಗತ ಕೋರಿದ ಕ್ಷಣ
ಕುರುಬ ಸಮುದಾಯದ ಪಾದಯಾತ್ರೆ ತುಮಕೂರಿಗೆ ಬಂದಾಗ ಕಲಾವಿದರು ಸ್ವಾಗತ ಕೋರಿದ ಕ್ಷಣ   

ಕೋರ: ‘ಶೋಷಿತ ಹಾಗೂ ತಳ ಸಮುದಾಯಗಳು ಹೋರಾಟದ ಮೂಲಕವೇ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ತಿಳಿಸಿದ್ದಾರೆ. ಕುರುಬಸಮುದಾಯವೂ ಹೋರಾಟದ ಮೂಲಕ ಮೀಸಲಾತಿ ಪಡೆಯಬೇಕು. ಇದಕ್ಕಾಗಿ ಒಗ್ಗಟ್ಟಾಗಬೇಕು’ ಎಂದು ಕಾಗಿನೆಲೆ ಕನಕಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ಕೋರದಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಮಾತನಾಡಿ, ‘ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕುರುಬ ಸಮುದಾಯಕ್ಕೆ ಎಸ್‌ಟಿ ಸೌಲಭ್ಯ ನೀಡಲಾಗುತ್ತಿದೆ. ಈ ಮೀಸಲಾತಿಯಿಂದ ಹಲವರು ಉದ್ಯೋಗ ಪಡೆದಿದ್ದಾರೆ. ಆದರೆ ‌ಉಳಿದ ಜಿಲ್ಲೆಗಳಲ್ಲಿರುವ ಕುರುಬರಿಗೆ ಈ ಸೌಲಭ್ಯ ಸಿಕ್ಕಿಲ್ಲ’ ಎಂದರು.

ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರಗಳು ನಮ್ಮ ಕೂಗನ್ನು ನಿರ್ಲಕ್ಷಿಸಿವೆ. ಸಿದ್ದರಾಮಯ್ಯ ಅವರು ಗೊಂಡ, ಕುರುಬ ಒಂದೇ ಸಮುದಾಯಗಳಾಗಿವೆ. ಅದೇ ರೀತಿ ಹಾಲುಮತ ಮತ್ತು ಕುರುಬ ಒಂದೇ ಆಗಿದ್ದು ಪರಿಶಿಷ್ಟ ಪಂಗಡಕ್ಕೆ ಪರಿಗಣಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ಹೇಳಿದರು.

ADVERTISEMENT

25 ವರ್ಷಗಳಿಂದ ಈ ಹೋರಾಟ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕುರುಬ ಸಮುದಾಯಕ್ಕೆ ಎಸ್‌ಟಿ ಸೌಲಭ್ಯ ದೊರೆಯುತ್ತಿದೆ. ಈ ಮೀಸಲಾತಿಯನ್ನು ರಾಜ್ಯದಾದ್ಯಂತ ವಿಸ್ತರಿಸಬೇಕು ಎಂದರು. ಕಾಗಿನೆಲೆ ಕನಕ ಗುರುಪೀಠದ ಅಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ,
ರೇವಣಸಿದ್ದೇಶ್ವರ ಮಠದ ಬಿಂದುಶೇಖರ್ ಒಡೆಯರ್ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ ಮಂಜುನಾಥ್, ಕುರುಬ ಸಮುದಾಯದ ಮುಖಂಡರಾದ ಟಿ.ಇಂದ್ರಕುಮಾರ್, ಎನ್.ಮಹೇಶ್, ಟಿ.ವೈ ಯೋಗೀಶ್, ಡಾ.ಎಂ.ಆರ್.ಹುಲಿನಾಯ್ಕರ್, ತುಮಕೂರು ಮಹಾನಗರ ಪಾಲಿಕೆ ಸದಸ್ಯ ನರಸಿಂಹರಾಜು, ಟೂಡಾ ಮಾಜಿ ಅಧ್ಯಕ್ಷ ಶಿವಮೂರ್ತಿ ಹಾಗೂ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು ಇದ್ದರು.

ಅಭೂತಪೂರ್ವ ಬೆಂಬಲ: ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಶಿರಾದಿಂದ ಹೊರಟ ಪಾದಯಾತ್ರೆ ಶನಿವಾರ ಬೆಳಿಗ್ಗೆ 9ಕ್ಕೆ ಕೋರ ತಲುಪಿತು. ಕುರುಬ ಸಮುದಾಯದ ಮುಖಂಡರು ಸ್ವಾಗತಿಸಿದರು.

ಕೋರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಜೀರ್ ಅಹಮದ್ ಮನೆಯಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ನಿರಂಜನಾನಂದಪುರಿ ಸ್ವಾಮೀಜಿ ವಾಸ್ತವ್ಯ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.