ADVERTISEMENT

ಗ್ರಾ.ಪಂ ಗದ್ದುಗೆಗೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 3:06 IST
Last Updated 4 ಜನವರಿ 2021, 3:06 IST

ತಿಪಟೂರು: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಲೆಹಾಕುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 26 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, 382 ಸದಸ್ಯರು ಆಯ್ಕೆಯಾಗಿದ್ದಾರೆ. ತಾಲ್ಲೂಕಿನ ಮತದಾರರು ಪಕ್ಷ ಆಧರಿಸದೆ ವ್ಯಕ್ತಿಗಳ ಆಧಾರದಲ್ಲಿ ಮತ ಚಲಾಯಿಸಿದ್ದಾರೆ. ಇದರಿಂದಾಗಿ ತಾಲ್ಲೂಕಿನಲ್ಲಿ ಕಾಂಗ್ರೆಸ್‌, ಬಿಜೆಪಿಯಿಂದ ಸಮಬಲದಲ್ಲಿಸದಸ್ಯರು ಆಯ್ಕೆಯಾಗಿದ್ದಾರೆ. ಎರಡೂ ಪಕ್ಷಗಳು ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯಲು ಕಾರ್ಯತಂತ್ರರೂಪಿಸುತ್ತಿವೆ.

ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ವರ್ಗವಾರು ನಿಗದಿಪಡಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ಪತ್ರ ರವಾನಿಸಿದ್ದು, ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿಯೂ ಮೀಸಲಾತಿಯ ಬಗ್ಗೆ ಅಂದಾಜು ಲೆಕ್ಕಾಚಾರ ಸಿದ್ಧವಾಗುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾದವರು ತಮ್ಮ ಗ್ರಾಮ ಅಭಿವೃದ್ಧಿ ಮಾಡುವ ಉತ್ಸಾಹದಲ್ಲಿದ್ದು, ಮುಂದಿನ ತಿಂಗಳೊಳಗೆ ಅಧಿಕೃತವಾಗಿ ಅಧಿಕಾರ ದೊರೆಯಲಿದೆ. ಈ ಮಧ್ಯೆ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚುವ ಸಾಧ್ಯತೆ ಇದೆ.

ADVERTISEMENT

ಪಕ್ಷೇತರವಾಗಿ ಗೆದ್ದಿರುವ ಅಭ್ಯರ್ಥಿಗಳಿಗೆ ಭಾರಿ ಬೇಡಿಕೆಯಿದ್ದು, ಚುನಾವಣೆಗೆ ಖರ್ಚು ಮಾಡಿದ ಹಣವನ್ನೆಲ್ಲಾ ಹಿಂಪಡೆಯುವ ಲೆಕ್ಕಾಚಾರದಲ್ಲಿ ಕೆಲವರಿದ್ದರೇ, ಅಧಿಕಾರವನ್ನು ಪಡೆದೇ ತೀರುವ ಹುಮ್ಮಸ್ಸಿನಲ್ಲಿ ಮತ್ತೆಕೆಲವರಿದ್ದಾರೆ.

ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್ ಹಲವಾರು ಗ್ರಾಮ ಪಂಚಾಯತಿಗಳಲ್ಲಿ ತಮ್ಮ ಬೆಂಬಲಿಗೆ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಸ್ಪಷ್ಟ ಬಹುಮತ ಇರದ ಕಡೆ ಶಶಿಧರ್‌ ಬೆಂಬಲಿತ ಅಭ್ಯರ್ಥಿಗಳ ಬೆಂಬಲ ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.