ADVERTISEMENT

ಎಂಜಿನಿಯರ್ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 4:39 IST
Last Updated 14 ನವೆಂಬರ್ 2020, 4:39 IST

ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಕಿರಿಯ ಎಂಜಿನಿಯರ್ ಆಗಿದ್ದ ವಿ.ಕಿರಣ್ ಕುಮಾರ್ ಮತ್ತು ಅವರ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಪಿ.ಆರ್.ಕಿರಣ್ ಕುಮಾರ್ ನನಗೆ ಅವಾಚ್ಯವಾಗಿ ಬೈದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪಾಲಿಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಿ.ಆರ್.ವಸಂತ್ ಅವರು ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಸುಳ್ಳು ಆರೋಪಗಳ ಭಿತ್ತಿಪತ್ರವನ್ನು ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ಸುಮಾರು ವರ್ಷಗಳಿಂದ ನಾನು ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿ.ಕಿರಣ್ ಕುಮಾರ್ ಮತ್ತು ಅವರ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಪಿ.ಆರ್.ಕಿರಣ್ ಅವರಿಗೆ ಸರಿಯಾಗಿ ಕೆಲಸ ನಿರ್ವಹಿಸಿ ಎಂದರೆ ಈ ಇಬ್ಬರು ಕೆಲಸ ನಿರ್ವಹಿಸಿದೆ ನನ್ನೊಂದಿಗೆ ಎದುರು ಮಾತನಾಡುತ್ತಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ನಾನು ರಜೆಯಲ್ಲಿ ಇದ್ದಾಗ ಮೇಲಧಿಕಾರಿಗಳ ‌ಗಮನಕ್ಕೆ ತರದೆ ಟೆಂಡರ್ ಪ್ರಕ್ರಿಯೆ ಸಹ ನಡೆಸಿದ್ದಾರೆ. ಕಿರಣ್ ಕುಮಾರ್ ವರ್ಗಾವಣೆಯಾದಾಗ ಕಡತಗಳನ್ನು ಕೊಟ್ಟಿಲ್ಲ. ಇದನ್ನು ಕೇಳಿದ ನನ್ನ ಮೇಲೆ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದರು. ನನ್ನ ವರ್ಗಾವಣೆ ಮಾಡಿಸಿದ್ದೀಯಾ. ನೀನು ತುಮಕೂರಿನಿಂದ ವರ್ಗಾವಣೆ ಮಾಡಿಸಿಕೊಂಡು ಹೋಗದಿದ್ದರೆ ನಿನ್ನನ್ನು ಸಮಯ ನೋಡಿ ಮುಗಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದರು. ನನ್ನ ತೇಜೋವಧೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಸುಳ್ಳು ಆರೋಪಗಳ ಭಿತ್ತಿ ಪತ್ರಗಳನ್ನು ಅಂಟಿಸಿದ್ದಾರೆ. ಇದರಿಂದ ಮಾನಸಿಕ ಕಿರುಕುಳ ಉಂಟಾಗಿದೆ. ಇವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.