ADVERTISEMENT

ಗೌಡರ ಸಾವು ಬಯಸಿದ ರಾಜಣ್ಣ: ಬಿಜೆಪಿ ಖಂಡನೆ

ಕ್ಷಮೆ ಕೇಳಲು ಸಚಿವ ರಾಜಣ್ಣಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 4:41 IST
Last Updated 7 ಏಪ್ರಿಲ್ 2024, 4:41 IST
ಬ್ಯಾಟರಂಗೇಗೌಡ
ಬ್ಯಾಟರಂಗೇಗೌಡ   

ತುಮಕೂರು: ‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಅಂತ್ಯ ಕಾಲದಲ್ಲಿ, ಸಾಯುವ ವಯಸ್ಸಿನಲ್ಲಿ ಬಿಜೆಪಿ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ’ ಎಂಬ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿಕೆಗೆ ಒಕ್ಕಲಿಗ ಸಮುದಾಯದ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಾಜಣ್ಣ ಪದೇ ಪದೇ ಎಚ್‌.ಡಿ.ದೇವೇಗೌಡರ ಸಾವು ಬಯಸುತ್ತಿದ್ದಾರೆ. ನಮ್ಮ ಜನಾಂಗದ ಸರ್ವೋಚ್ಛ ನಾಯಕ ದೇವೇಗೌಡರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುತ್ತಿರುವುದು ಖಂಡನೀಯ’ ಎಂದು ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ ನಾಯಕರು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಒಕ್ಕಲಿಗರು ತುಂಬಾ ಬುದ್ಧಿವಂತರು. ನಿಮ್ಮ ಹೇಳಿಕೆಗೆ ಹಾಸನ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಸರಿಯಾದ ಪಾಠ ಕಲಿಸುತ್ತಾರೆ. ಇಂತಹ ಮಾತುಗಳಿಂದ ನಿಮ್ಮ ವ್ಯಕ್ತಿತ್ವ ಕಡಿಮೆಯಾಗುತ್ತದೆ. ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ರಾಜಣ್ಣ ಅವರ ಮಾತು, ನಡವಳಿಕೆ, ವರ್ತನೆ ಒಕ್ಕಲಿಗ ಜನಾಂಗಕ್ಕೆ ನೋವು ಕೊಟ್ಟಿದೆ. ಕಾಂಗ್ರೆಸ್‌ನವರು ಬಿಜೆಪಿ ಅಭ್ಯರ್ಥಿ ಸೋಮಣ್ಣ ಬಗ್ಗೆ ‘ಹೊರಗಿನವರು’ ಎಂದು ಟೀಕಿಸುವುದನ್ನು ಕೈಬಿಡಬೇಕು. ಅವರು ಈಗ ನಮ್ಮ ಜಿಲ್ಲೆಯವರಾಗಿದ್ದಾರೆ ಎಂದರು.

ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ್‌, ‘ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಸೋಲಿನ ಹತಾಶೆ ಕಾಡುತ್ತಿದೆ. ಅದಕ್ಕಾಗಿ ಅವರು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸಜ್ಜನ ರಾಜಕಾರಣಿಯಾಗಿದ್ದರು. ಈಗ ಅವರೂ ಕಾಂಗ್ರೆಸ್‌ನ ಇತರೆ ನಾಯಕರಂತೆ ಆಗಿದ್ದಾರೆ. ಅಸಹ್ಯವಾದ ಮಾತುಗಳನ್ನು‌ ಆಡಿ, ವ್ಯಕ್ತಿತ್ವ ಹಾಳು ಮಾಡಿಕೊಳ್ಳಬೇಡಿ’ ಎಂದು ಹೇಳಿದರು.

ರಾಜಣ್ಣ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡದಿದ್ದಾಗ ದೇವೇಗೌಡರು ಅವರ ಕೈ ಹಿಡಿದು ಕರೆ ತಂದು ಶಾಸಕರನ್ನಾಗಿ ಮಾಡಿದ್ದರು. ರಾಜಕೀಯವಾಗಿ ಜನ್ಮ ಕೊಟ್ಟವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ ಕೇಳಬೇಕು.‌ ಇಲ್ಲದಿದ್ದರೆ ಇಡೀ ಸಮುದಾಯ ನಿಮ್ಮ ಮೇಲೆ‌ ತಿರುಗಿ ಬೀಳುತ್ತದೆ ಎಂದು ಎಚ್ಚರಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖಂಡರಾದ ಬೆಳ್ಳಿ ಲೋಕೇಶ್, ಟಿ.ಆರ್.ಸದಾಶಿವಯ್ಯ, ರವೀಶಯ್ಯ, ರೇವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.