ADVERTISEMENT

ಒಕ್ಕಲಿಗರ ಸಂಘದ ಮುಸುಕಿನ ಗುದ್ದಾಟ

ಕುಣಿಗಲ್‌ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರ ಪದಚ್ಯುತಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 16:47 IST
Last Updated 26 ಡಿಸೆಂಬರ್ 2020, 16:47 IST

ಕುಣಿಗಲ್: ತಾಲ್ಲೂಕಿನ ಒಕ್ಕಲಿಗರ ಸಂಘದ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ನಿರ್ದೇಶಕರ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ.

ಅಧ್ಯಕ್ಷರನ್ನೇ ಪದಚ್ಯುತಗೊಳಿಸಿ, ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸರ್ವಸದಸ್ಯರ ಸಭೆ ಹಾಗೂ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ವಿರುದ್ಧ ಹಣದುರುಪಯೋಗದ ಆರೋಪ ಹೊರೆಸಿ ಕ್ರಮಕ್ಕಾಗಿ ಕಾರ್ಯದರ್ಶಿ ಅನಂತಯ್ಯ ಸಚಿವರಿಗೆ ದೂರು ನೀಡಿದ್ದಾರೆ.

ಸಂಘದ ಕಾರ್ಯದರ್ಶಿ ಅವರು ಸಹಕಾರ ಸಚಿವರಿಗೆ ಬರದಿರುವ ದೂರಿನ ಪ್ರತಿ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಅಧ್ಯಕ್ಷರಾಗಿದ್ದ ರಾಮಸ್ವಾಮಿಗೌಡ ಅವರು ಜ್ಞಾನಭಾರತಿ ವಿದ್ಯಾಸಂಸ್ಥೆ ಶಿಕ್ಷಕರ ವೇತನದ ಭದ್ರತೆಗಾಗಿ ಐಒಬಿ ಬ್ಯಾಂಕನಲ್ಲಿ ಇಟ್ಟಿದ್ದ ಠೇವಣಿ ಮೇಲೆ 2005ರಲ್ಲಿ ₹4 ಲಕ್ಷ ವೈಯುಕ್ತಿಕವಾಗಿ ಸಾಲಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ. ಮತ್ತೊಂದು ಬಾಂಡ್‌ನಿಂದ ₹2.5ಲಕ್ಷ ಹಣವನ್ನು 2005ರಲ್ಲಿ ಪಡೆದಿದ್ದಾರೆ‌. 30-3-2019ರಲ್ಲಿ ಬ್ಯಾಂಕ್‌ನಿಂದ ₹6.80ಲಕ್ಷವನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಪಡೆದಿದ್ದಾರೆ. ಡಿ.ಎಡ್ ಕಾಲೇಜಿನ ಪ್ರಾಂಶುಪಾಲರಿಂದ ₹9.87 ಲಕ್ಷ ಪಡೆದಿದ್ದಾರೆ. ಕಾರ್ಯಕಾರಿ ಸಮಿತಿಯ ಒಪ್ಪಿಗೆ ಪಡೆಯದೆ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ನೋಟಿಸ್ ನೀಡಿದ್ದರೂ, ಉತ್ತರಿಸದ ಕಾರಣ ಡಿಸೆಂಬರ್‌ 2ರಂದು ಕಾರ್ಯಕಾರಿ ಮಂಡಳಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ ಈ
ಬಗ್ಗೆ ಮಾಹಿತಿ ನೀಡಿದ್ದರೂ ತಿರಸ್ಕರಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಡಿಸೆಂಬರ್‌ 28ರಂದು ಉಪಾಧ್ಯಕ್ಷ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಸರ್ವಸದಸ್ಯರ ಸಭೆ ಕರೆಯಲಾಗಿದೆ. ಅಧ್ಯಕ್ಷರಾಗಿದ್ದ ಬಿ.ಬಿ.ರಾಮಸ್ವಾಮಿಗೌಡರ ವಿರುದ್ಧ ಷಡ್ಯಂತ್ರದಿಂದಾಗಿ ಸಂಘದ ವ್ಯವಸ್ಥೆಗೆ ಧಕ್ಕೆ ಉಂಟುಮಾಡಲಾಗುತ್ತಿದೆ ಎಂದು ಬಿಬಿಆರ್ ಬೆಂಬಲಿಗರಾದ ಶ್ರೀನಿವಾಸ್, ರಾಜಣ್ಣ, ಶಿವರಾಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 19 ವರ್ಷಗಳಿಂದ ಅಧ್ಯಕ್ಷರಾಗಿ
ಜ್ಞಾನಭಾರತಿ ವಿದ್ಯಾಸಂಸ್ಥೆಯನ್ನು ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳಸುವಲ್ಲಿ ರಾಮಸ್ವಾಮಿಗೌಡ ಅವರ ಪಾತ್ರ ಪ್ರಮುಖವಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.