ADVERTISEMENT

ತುಮಕೂರು | ಕಾಂಗ್ರೆಸ್‌ ಒಂದೇ ಪರಿವಾರಕ್ಕೆ ಸೀಮಿತ: ಟೀಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:10 IST
Last Updated 19 ಮಾರ್ಚ್ 2023, 8:10 IST
ಹುಳಿಯಾರು ಪಟ್ಟಣಕ್ಕೆ ಶನಿವಾರ ಆಗಮಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿ.ಎಸ್. ಯಡಿಯೂರಪ್ಪ ಜನರತ್ತ ಕೈ ಬೀಸಿದರು
ಹುಳಿಯಾರು ಪಟ್ಟಣಕ್ಕೆ ಶನಿವಾರ ಆಗಮಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿ.ಎಸ್. ಯಡಿಯೂರಪ್ಪ ಜನರತ್ತ ಕೈ ಬೀಸಿದರು   

ಹುಳಿಯಾರು: ‘ಸದಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್‌ ಒಂದು ಪರಿವಾರದ ಪಕ್ಷವಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದರು.

ಪಟ್ಟಣಕ್ಕೆ ಶನಿವಾರ ಸಂಜೆ ವಿಜಯ ಸಂಕಲ್ಪ ಯಾತ್ರೆ ಮೂಲಕ ಆಗಮಿಸಿದ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಸಾಧಾರಣ ಕುಟುಂಬದಿಂದ ಬಂದ ವ್ಯಕ್ತಿ ಬಿಜೆಪಿಯಲ್ಲಿ ಉನ್ನತ ಹುದ್ದೆ ಹೊಂದಬಹುದು. ಆದರೆ, ಕಾಂಗ್ರೆಸ್‌ನಲ್ಲಿ ಇದು ಸಾಧ್ಯವಿಲ್ಲ. ಕೇವಲ ನೆಹರೂ ಕುಟುಂಬ ಮಾತ್ರ ಉನ್ನತ ಹುದ್ದೆ ಪಡೆಯುವ ಅವಕಾಶ ಕಾಂಗ್ರೆಸ್‌ನಲ್ಲಿದೆ ಎಂದು ಟೀಕಿಸಿದರು.

ADVERTISEMENT

ನರೇಂದ್ರ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದ ನಂತರ ದೇಶ ಬಲಿಷ್ಠವಾಗಿದೆ. ಜತೆಗೆ ವಿಶ್ವದ ಇತರೇ ದೇಶಗಳು ಭಾರತದತ್ತ ನೋಡುವಂತೆ ಮಾಡಿದ್ದಾರೆ. ಆದರೆ, ರಾಹುಲ್‌ ಗಾಂಧಿ ಇಂಗ್ಲೆಂಡ್‌ ಸಂಸತ್‌ನಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದೆ ಎಂದು ಹೇಳುವ ಮೂಲಕ ದೇಶದ ಮಾರ್ಯಾದೆ ತೆಗೆದಿದ್ದಾರೆ ಎಂದು ಆರೋಪಿಸಿದರು.

ರಾಹುಲ್‌ ಗಾಂಧಿ ಬಿಜೆಪಿಯ ಯಶಸ್ಸು ನೋಡಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು ಹುಚ್ಚರಂತೆ ವರ್ತಿಸುತ್ತಿದ್ದಾರೆ ಎಂದರು.

ಮೋದಿ ಅವರು ರಾಜ್ಯಕ್ಕೆ ಹತ್ತು ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಮೊಬೈಲ್‌ ತಯಾರಿಕಾ ಕಂಪನಿ, ತುಮಕೂರಿನಲ್ಲಿ ಎಚ್‌ಎಎಲ್‌ ಘಟಕ ಸ್ಥಾಪಿಸುವ ಮೂಲಕ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್‌ ನಾಯಕರು ಅಧಿಕಾರದ ಭ್ರಮೆಯಲ್ಲಿ ಮುಳುಗಿದ್ದಾರೆ. ರಾಜ್ಯದ ಜನರಿಗೆ ಸುಳ್ಳು ಭರವಸೆ ನೀಡುವ ಮೂಲಕ ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ ಎಂದು ದೂರಿದರು.

ಈಗಾಗಲೇ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು ಜನರಿಂದ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನ ಪಡೆಯಲಿದೆ. ಅದರ ವೇಗವನ್ನು ತಡೆಯಲು ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಂದ ಸಾಧ್ಯವಿಲ್ಲ ಎಂದರು.

‘ಈಗಾಗಲೇ ನನಗೆ 80 ವರ್ಷ ತುಂಬಿದೆ. ಈ ಬಾರಿ ರಾಜ್ಯದ ಉದ್ದಗಲಕ್ಕೆ ಸಂಚರಿಸಿ ದೇವರು ಅವಕಾಶ ಕೊಟ್ಟರೆ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ಪಕ್ಷ ಸಂಘಟನೆಯೇ ನನ್ನ ಗುರಿಯಾಗಿದೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್‌, ಸಚಿವರಾದ ಆರ್. ಅಶೋಕ, ಜೆ.ಸಿ. ಮಾಧುಸ್ವಾಮಿ, ವಿಧಾನ ಪರಿಷತ್‌ ಮುಖ್ಯ ಸಚೇತಕ ವಿ. ನಾರಾಯಣಸ್ವಾಮಿ, ಶಾಸಕ ಮಸಾಲ ಜಯರಾಮ್‌, ಮಾಜಿ ಶಾಸಕ ಸೊಗಡು ಶಿವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.