ಎಚ್.ಎಸ್.ರವಿಶಂಕರ್
ತುಮಕೂರು: ನಗರದ ಮರಳೂರಿನ ಸರ್ವೆ ನಂ 87/2ರಲ್ಲಿ 2 ಎಕರೆ ಜಾಗವನ್ನು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಮಂಜೂರು ಮಾಡಿ ನೋಂದಣಿ ಮಾಡಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಅಕ್ರಮವಾಗಿ ಮಾಡಿರುವ ನೋಂದಣಿ ರದ್ದುಪಡಿಸುವಂತೆ ಬಿಜೆಪಿ ಒತ್ತಾಯಿಸಿದೆ.
‘ರಾಜೀವ್ ಗಾಂಧಿ ಅರ್ಬನ್ ಅಂಡ್ ರೂರಲ್ ಡೆವಲಪ್‌ಮೆಂಟ್’ ಸಂಸ್ಥೆಗೆ ಜಮೀನು ಕೋರಿ ರಾಜ್ಯ ಸಚಿವ ಸಂಪುಟ ಸಭೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಸಭೆಯಲ್ಲಿ ‘ಕಾಂಗ್ರೆಸ್ ಭವನ ಟ್ರಸ್ಟ್’ಗೆ ಮಂಜೂರು ಮಾಡಲಾಗಿದ್ದು, ಇದು ಗೊಂದಲದಿಂದ ಕೂಡಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಇಲ್ಲಿ ಬುಧವಾರ ಆರೋಪಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಮಂಜೂರು ಮಾಡಿರುವ ಜಮೀನನ್ನು ನೋಂದಣಿ ಮಾಡಲು ಬರುವುದಿಲ್ಲ. ಕರ್ನಾಟಕ ನೋಂದಣಿ ಕಾಯ್ದೆ 1908 ಸೆಕ್ಷನ್ 17ರ ಪ್ರಕಾರ ಈ ನೋಂದಣಿ ಪತ್ರ ಮಾನ್ಯವಾಗುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮರಳೂರು ಗ್ರಾಮದ ಸರ್ವೆ ನಂ 87/1, 87/2ನಲ್ಲಿ ಒಟ್ಟು 4 ಎಕರೆ ಜಮೀನನ್ನು ಕಸ ಸಂಗ್ರಹ ಉದ್ದೇಶಕ್ಕೆ 1943ರಲ್ಲಿ ನಗರಸಭೆಗೆ ಭೂ ಸ್ವಾಧೀನವಾಗಿರುತ್ತದೆ. ಈ ಜಮೀನಿನ ರೈತರು ನ್ಯಾಯಾಲಯದ ಮೊರೆ ಹೋಗಿದ್ದು, ವಿಚಾರಣೆ ನಡೆಯುತ್ತಿದೆ. ಆದರೂ ಕಾಂಗ್ರೆಸ್ ಭವನಕ್ಕೆ ಮಂಜೂರು ಮಾಡಲಾಗಿದೆ. ಪ್ರತ್ಯೇಕ ಪೋಡಿ ಇಲ್ಲದೆ ಬಹು ಮಾಲೀಕತ್ವ ಇರುವ ಸರ್ವೆ ಸಂಖ್ಯೆಯ ಭೂಮಿಗೆ ಎರಡೇ ದಿನದಲ್ಲಿ ಇ–ಖಾತಾ ಮಾಡಲಾಗಿದೆ. ಇ–ಖಾತೆ ಮಾಡಿಕೊಡಲು ಯಾವುದೇ ನಿಯಮ ಪಾಲಿಸಿಲ್ಲ ಎಂದು ದೂರಿದರು.
ಸಂಪುಟ ಸಭೆಯ ನಿರ್ಧಾರದಂತೆ ಮಾರ್ಗಸೂಚಿ ಮೌಲ್ಯದ (ಎಸ್.ಆರ್) ಶೇ 5ರಷ್ಟು ಬೆಲೆ ವಿಧಿಸಿ ನೋಂದಣಿ ಮಾಡಬೇಕಿದೆ. ಆದರೆ ಷರತ್ತು ಉಲ್ಲಂಘಿಸಿ ಮಾರ್ಗಸೂಚಿ ದರಕ್ಕಿಂತಲೂ ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಸಿ, ಮುದ್ರಾಂಕ ಶುಲ್ಕ ನೀಡದೆ ವಂಚಿಸಲಾಗಿದೆ. ಸರ್ವೆ ನಂ 87/2ರ ಜಮೀನಿಗೆ ಮಾರ್ಗಸೂಚಿ ದರ ಪ್ರತಿ ಚದರ ಮೀಟರ್‌ಗೆ ₹28 ಸಾವಿರವಿದ್ದು, ಎರಡು ಎಕರೆಗೆ ₹21.24 ಕೋಟಿಯಾಗುತ್ತದೆ. ಸಚಿವ ಸಂಪುಟದ ನಿರ್ಣಯದಂತೆ ಶೇ 5ರಷ್ಟು ಎಸ್.ಆರ್ ಮೌಲ್ಯವನ್ನು ಲೆಕ್ಕ ಹಾದರೆ ₹1.06 ಕೋಟಿಗೆ ನೋಂದಾಯಿಸಿ, ₹8.10 ಲಕ್ಷ ಮುದ್ರಾಂಕ ಶುಲ್ಕ ಪಾವತಿಸಬೇಕಿತ್ತು. ಆದರೆ ₹17 ಲಕ್ಷಕ್ಕೆ ನೋಂದಾಯಿಸಿ, ₹92,200 ಮುದ್ರಾಂಕ ಶುಲ್ಕ ಪಾವತಿಸಿ, ಸರ್ಕಾರಕ್ಕೆ ವಂಚಿಸಲಾಗಿದೆ ಎಂದು ಆರೋಪಿಸಿದರು.
ಮುಖಂಡರಾದ ಬಿ.ಎಸ್.ನಾಗೇಶ್, ಸಂದೀಪ್‍ಗೌಡ, ಎಚ್.ಎಂ.ರವೀಶಯ್ಯ, ಕೆ.ಧನುಷ್, ವಿರೂಪಾಕ್ಷಪ್ಪ, ಜೆ.ಜಗದೀಶ್, ಹನುಮಂತರಾಜು, ಮರಿತಿಮ್ಮಯ್ಯ, ಕೆ.ಎಸ್.ಕುಮಾರ್, ರಕ್ಷಿತ್ ಉಪಸ್ಥಿತರಿದ್ದರು.
ಕಾಂಗ್ರೆಸ್ ಭವನಕ್ಕೆ ಜಮೀನು ನೋಂದಣಿ ಮಾಡುತ್ತಿದ್ದ ಸಮಯದಲ್ಲಿ ಪ್ರಶ್ನಿಸಲು ನಗರದ ಉಪನೋಂದಣಾಧಿಕಾರಿ ಕಚೇರಿಗೆ ಹೋಗಿದ್ದ ಬಿಜೆಪಿ ಮುಖಂಡರ ಮೇಲೆ ಹಲ್ಲೆ ನಡೆಸಿದ ‘ಗೂಂಡಾ ಪೊಲೀಸರ’ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಹೇಳಿದರು. ಪೊಲೀಸರು ರೌಡಿಗಳಂತೆ ವರ್ತಿಸಿ ತಾಲಿಬಾನ್ ಸಂಸ್ಕೃತಿ ತೋರಿಸಿದ್ದಾರೆ. ಕಾಂಗ್ರೆಸ್ ಪರವಾದ ಗೂಂಡಾಗಳಂತೆ ನಡೆದುಕೊಂಡಿದ್ದಾರೆ. ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.