ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೆ ಕಾಂಗ್ರೆಸ್ ಅಡ್ಡಿ: ಮಂದಕೃಷ್ಣ

ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಆರೋಪ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 15:47 IST
Last Updated 18 ಏಪ್ರಿಲ್ 2024, 15:47 IST
ಮಧುಗಿರಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯನ್ನು ತಮಟೆ ಬಾರಿಸುವ ಮೂಲಕ ಮಂದಕೃಷ್ಣ ಉದ್ಘಾಟಿಸಿದರು
ಮಧುಗಿರಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯನ್ನು ತಮಟೆ ಬಾರಿಸುವ ಮೂಲಕ ಮಂದಕೃಷ್ಣ ಉದ್ಘಾಟಿಸಿದರು   

ಮಧುಗಿರಿ: ‘ಸದಾಶಿವ ಆಯೋಗದ ವರದಿ ಜಾರಿಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ’ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಆರೋಪಿಸಿದರು.

ಪಟ್ಟಣದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಕರ್ನಾಟಕ, ತಮಿಳುನಾಡು, ತೆಲಂಗಾಣದಲ್ಲಿ ಮಾದಿಗ ಸಮುದಾಯ ಬಹಳ ಹಿಂದುಳಿದಿದೆ. ಅಭಿವೃದ್ಧಿ ಹೋರಾಟಕ್ಕೆ ಕಾಂಗ್ರೆಸ್ ವಿರುದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಮ್ಮ ಹೋರಾಟಕ್ಕೆ ಬೆಂಬಲಿಸುತ್ತಿದ್ದಾರೆ’ ಎಂದರು.

ADVERTISEMENT

ಕಾಂಗ್ರೆಸ್ ಛಲವಾದಿ ಸಮುದಾಯದ ಪರವಾಗಿದ್ದರೆ, ಬಿಜೆಪಿ ಮಾದಿಗ ಸಮುದಾಯದ ಪರವಾಗಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆರು ಜನ ಮಾದಿಗ ಸಮುದಾಯದವರಿಗೆ ಟಿಕೆಟ್ ನೀಡಿತ್ತು. ಆಗ ಬಿಜೆಪಿ 13 ಮಂದಿಗೆ ಟಿಕೆಟ್ ನೀಡಿತ್ತು ಎಂದು ತಿಳಿಸಿದರು.

ಮೋದಿ ಸರ್ಕಾರದ ವಿರುದ್ಧ ಯಾವುದೇ ವೈಫಲ್ಯಗಳಿಲ್ಲ. ಹಾಗಾಗಿ ಕಾಂಗ್ರೆಸ್‌ನವರು ‘ಸಂವಿಧಾನವನ್ನು ಬಿಜೆಪಿಯವರು ಬದಲಾಯಿಸುತ್ತಾರೆ’ ಎಂಬ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಮಾಜಿ ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ಮಾದಿಗರ ಬಹುದಿನಗಳ ಬೇಡಿಕೆ ಈಡೇರಲು ನರೇಂದ್ರ ಮೋದಿ ಅವರ ಅವಶ್ಯಕತೆ ಇದೆ ಎಂದು ಹೇಳಿದರು.

ಮುಖಂಡರಾದ ಪಾವಗಡ ಶ್ರೀರಾಮ್, ವೈ.ಎಚ್. ಹುಚ್ಚಯ್ಯ, ಅನಿಲ್ ಕುಮಾರ್, ಎಲ್.ಸಿ. ನಾಗರಾಜು, ಕೊಂಡವಾಡಿ ಚಂದ್ರಶೇಖರ್, ಎಸ್‌ಡಿ ಕೃಷ್ಣಪ್ಪ, ಶಿವಕುಮಾರ್, ಕಂಬಣ್ಣ, ಸಿದ್ದಾಪುರ ರಮೇಶ್, ಎಚ್.ಡಿ. ವೆಂಕಟೇಶ್, ಸುಮುಖ್ ಕೊಂಡವಾಡಿ, ಶೈಲಾಜಾ ವಿ ಸೋಮಣ್ಣ, ಸುರೇಶ್ ಚಂದ್ರ, ಪುರವರ ನರಸಿಂಹಮೂರ್ತಿ, ಗುಂಡಗಲ್ಲು ಶಿವಣ್ಣ  ಪಾಲ್ಗೊಂಡಿದ್ದರು.

ಪರಮೇಶ್ವರ, ಖರ್ಗೆ ವಿರೋಧ

ಕೊರಟಗೆರೆ: ಕಾಂಗ್ರೆಸ್ ಮಾದಿಗ ವಿರೋಧಿ ಪಕ್ಷ. ಒಳಮೀಸಲಾತಿ ಹೋರಾಟದಲ್ಲಿ ಹಿಂದಿನಿಂದಲೂ ಅನ್ಯಾಯ ಮಾಡುತ್ತಲೇ ಬಂದಿದೆ. ಸದಾಶಿವ ಆಯೋಗದ ವರದಿ ಜಾರಿಗೆ ತಟಸ್ಥ ನಿಲುವು ತಾಳಿದೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಆರೋಪಿಸಿದರು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಕೇವಲ ಛಲವಾದಿ ಸಮುದಾಯಕ್ಕೆ ಮನ್ನಣೆ ನೀಡುತ್ತಿದೆ. ಒಳ ಮೀಸಲಾತಿ ಜಾರಿಗೆ ರಾಜ್ಯದಲ್ಲಿ ಜಿ.ಪರಮೇಶ್ವರ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರೋಧ ಮಾಡುತ್ತಿದ್ದಾರೆ. ಹಾಗಾಗಿ ಆ ಪಕ್ಷದವರು ಇವರು ಹೇಳಿದಂತೆ ತಲೆಯಾಡಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾದಿಗರನ್ನು ಕಡೆಗಣಿಸಲಿದೆ. ಒಳ ಮೀಸಲಾತಿ ಜಾರಿಯಾಗಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು. ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಮುಖಂಡರಾದ ಬಿ.ಎಚ್.ಅನಿಲ್ ಕುಮಾರ್ ವೈ.ಎಚ್. ಹುಚ್ಚಯ್ಯ ದೊಡ್ಡೇರಿ ವೆಂಕಟೇಶ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್ ಮುಖಂಡರಾದ ಪಾವಗಡ ಶ್ರೀರಾಮ್ ದಾಡಿ ವೆಂಕಟೇಶ್ ಸಿ.ಎಸ್.ಹನುಮಂತರಾಜು ಲಕ್ಷ್ಮಿನರಸಯ್ಯ ಆನಂದ್ ಅನಿತಾ ನರಸೀಯಪ್ಪ ನರಸಪ್ಪ ಶಿವರಾಜು ನಾಗರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.