ತುಮಕೂರು: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆಗೆ ಪಕ್ಷದ ವರಿಷ್ಠರು ಹಸಿರು ನಿಶಾನೆ ತೋರಿದ್ದು, ಮೂವರು ವೀಕ್ಷಕರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜಿ.ಚಂದ್ರಶೇಖರ್‌ಗೌಡ ಕಳೆದ ಎರಡು ವರ್ಷ ಎಂಟು ತಿಂಗಳಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ನವೆಂಬರ್ ಹೊತ್ತಿಗೆ ಮೂರು ವರ್ಷ ತುಂಬಲಿದೆ. ಈ ಹಿಂದೆ ಆರ್.ರಾಮಕೃಷ್ಣ ಅಧ್ಯಕ್ಷರಾಗಿದ್ದರು.
ಹೊಸ ಅಧ್ಯಕ್ಷರ ನೇಮಕ ಮಾಡುವ ಸಲುವಾಗಿ ಮಾಜಿ ಸಂಸದರಾದ ಜಯಪ್ರಕಾಶ ಹೆಗ್ಡೆ, ರಾಜೀವ್‌ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಫ್.ಎಚ್.ಜಕ್ಕಪ್ಪನವರ್ ಅವರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಸಚಿವರು, ಶಾಸಕರು, ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು, ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ಸ್ಥಳೀಯ ಸಂಸ್ಥೆ ಮಾಜಿ ಸದಸ್ಯರು ಸೇರಿದಂತೆ ಪ್ರಮುಖರ ಜತೆಗೆ ಸಮಾಲೋಚನೆ ನಡೆಸಿ ಹೊಸ ಅಧ್ಯಕ್ಷರ ನೇಮಕಕ್ಕೆ ಶಿಫಾರಸು ಮಾಡಲಿದ್ದಾರೆ.
ಪ್ರಮುಖವಾಗಿ ಈಗ ಇರುವ ಅಧ್ಯಕ್ಷರನ್ನೇ ಮುಂದುವರಿಸಬೇಕೆ? ಹೊಸಬರ ನೇಮಕ ಮಾಡಬೇಕೆ? ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ ನಂತರ ವೀಕ್ಷಕರು ನಿರ್ಧಾರ ಕೈಗೊಳ್ಳಲಿದ್ದಾರೆ. ಹಾಲಿ ಅಧ್ಯಕ್ಷರ ಕಾರ್ಯವೈಖರಿ, ಪಕ್ಷ ಸಂಘಟನೆ, ಅಧ್ಯಕ್ಷರಾಗಿದ್ದ ಸಮಯದಲ್ಲಿ ಉಂಟಾದ ವಿವಾದಗಳು ಸೇರಿದಂತೆ ಪಕ್ಷ ಸಂಘಟನೆ ದೃಷ್ಟಿಯಿಂದ ಒಂದು ನಿರ್ಧಾರಕ್ಕೆ ಬರಲಿದ್ದಾರೆ.
ಅಭಿಪ್ರಾಯ ಸಂಗ್ರಹದ ಸಮಯದಲ್ಲಿ ಈಗ ಇರುವ ಅಧ್ಯಕ್ಷರ ಪರ ಒಲವು ವ್ಯಕ್ತಪಡಿಸಿ, ಅವರನ್ನೇ ಮುಂದುವರಿಸುವಂತೆ ಸಲಹೆಗಳು ಬಂದರೆ ಅದನ್ನೇ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಒಂದು ವೇಳೆ ಅಧ್ಯಕ್ಷರ ಕಾರ್ಯವೈಖರಿ ಹಾಗೂ ಪಕ್ಷ ಸಂಘಟನೆ ಸರಿಯಾಗಿ ನಡೆಯುತ್ತಿಲ್ಲ. ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದರೆ ಹೊಸ ಅಧ್ಯಕ್ಷರ ನೇಮಕಕ್ಕೆ ತಲಾಷೆ ನಡೆಯುತ್ತದೆ. ತುಮಕೂರು ಜಿಲ್ಲೆಯ ಅಧ್ಯಕ್ಷರ ವಿಚಾರದಲ್ಲಿ ಈವರೆಗೆ ಅಂತಹ ಅಪಸ್ವರಗಳು ಕೇಳಿಬಂದಿಲ್ಲ. ಪಕ್ಷದ ಪ್ರಮುಖರಿಂದ ಬರುವ ಅಭಿಪ್ರಾಯದ ಮೇಲೆ ಚಂದ್ರಶೇಖರ್‌ಗೌಡ ಅವರನ್ನು ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕಾದ ವಾತಾವರಣ ನಿರ್ಮಾಣವಾದರೆ ಯಾರನ್ನು ನೇಮಕ ಮಾಡಬೇಕು ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಶಾಸಕರು ಅಥವಾ ಜಿಲ್ಲೆಯ ಹಿರಿಯ ಮುಖಂಡರೊಬ್ಬರಿಗೆ ಜವಾಬ್ದಾರಿ ವಹಿಸುವ ಬಗ್ಗೆ ವೀಕ್ಷಕರು ಕೆಪಿಸಿಸಿಗೆ ಶಿಫಾರಸು ಮಾಡಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.
ಪರಮೇಶ್ವರ ನಿರ್ಧಾರ: ಜಿಲ್ಲೆಯ ಅಧ್ಯಕ್ಷರನ್ನು ಮುಂದುವರಿಸುವುದು ಅಥವಾ ಬದಲಾಯಿಸುವುದು ಪ್ರಮುಖವಾಗಿ ಸಚಿವರಾದ ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಹಿರಿಯರಾದ ಟಿ.ಬಿ.ಜಯಚಂದ್ರ ನಿರ್ಧಾರದ ಮೇಲೆ ನಿಂತಿದೆ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲೆಯ ‘ಹೈಕಮಾಂಡ್’ ಪರಮೇಶ್ವರ ಅವರ ನಿಲುವೇ ಅಂತಿಮ. ಅವರು ಸೂಚಿಸಿದವರು ಅಧ್ಯಕ್ಷರಾಗುತ್ತಾರೆ ಎನ್ನಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳು ಕಾಣುತ್ತಿಲ್ಲ. ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡವರಿಗೆ ಆರ್ಥಿಕ ಸಂಪನ್ಮೂಲವೂ ಬೇಕಾಗುತ್ತದೆ. ಪಕ್ಷ ಸಂಘಟನೆ, ಕಚೇರಿ ನಿರ್ವಹಣೆ ಸೇರಿದಂತೆ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ‘ಆರ್ಥಿಕ ಹೊರೆ’ ಹೊತ್ತುಕೊಂಡು ಪಕ್ಷ ಮುನ್ನಡೆಸಬೇಕಾದ ಜವಾಬ್ದಾರಿ ಹೊರಲು ಹಲವರು ಹಿಂದೇಟು ಹಾಕುತ್ತಿದ್ದಾರೆ ಎಂದು ಮುಖಂಡರೊಬ್ಬರು ತಿಳಿಸಿದರು.
ರಾಜ್ಯದಲ್ಲಿ ಬೆಳಗಾವಿ ಹೊರತುಪಡಿಸಿದರೆ ತುಮಕೂರು ಅತಿ ದೊಡ್ಡ ಜಿಲ್ಲೆ. ಒಬ್ಬರಿಗೆ ಇಡೀ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವುದು ಕಷ್ಟಕರ. ಹಾಗಾಗಿ ಎರಡು ವಿಭಾಗ ಮಾಡಿ ಇಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಚಿಂತನೆಗಳು ನಡೆದಿವೆ. ವೀಕ್ಷಕರು ಅಭಿಪ್ರಾಯ ಸಂಗ್ರಹದ ಸಮಯದಲ್ಲಿ ಈ ವಿಚಾರ ಪ್ರಸ್ತಾಪವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿ ಸಂಘಟನಾತ್ಮಕವಾಗಿ ಎರಡು ಜಿಲ್ಲೆಯನ್ನಾಗಿ ವಿಂಗಡಿಸಿದ್ದು ತುಮಕೂರು ಹಾಗೂ ಮಧುಗಿರಿ ವಿಭಾಗಕ್ಕೆ ಇಬ್ಬರು ಅಧ್ಯಕ್ಷರನ್ನು ನೇಮಕ ಮಾಡಿಕೊಂಡಿದೆ. ಅದೇ ರೀತಿ ಕಾಂಗ್ರೆಸ್‌ನಲ್ಲೂ ಎರಡು ವಿಭಾಗ ಮಾಡಿ ಅಧ್ಯಕ್ಷರನ್ನು ನೇಮಕ ಮಾಡುವಂತೆ ವೀಕ್ಷಕರ ಮೇಲೆ ಒತ್ತಡ ಹಾಕಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.
‘ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮುಂದಿನ ನವೆಂಬರ್‌ಗೆ ಮೂರು ವರ್ಷ ತುಂಬಲಿದೆ. ನನ್ನ ಅವಧಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಏಳು ಶಾಸಕರು ಆಯ್ಕೆಯಾಗಿದ್ದಾರೆ. ಇಷ್ಟು ಸಮಯ ಪಕ್ಷ ಸಂಘಟನೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ ಹೇಳುತ್ತಾರೆ. ಎರಡು ಸಂಘಟನಾತ್ಮಕ ಜಿಲ್ಲೆ ಮಾಡಿ ಇಬ್ಬರು ಅಧ್ಯಕ್ಷರನ್ನು ನೇಮಕ ಮಾಡಿದರೆ ಪಕ್ಷ ಸಂಘಟನೆಗೆ ನೆರವಾಗಲಿದೆ. ಈ ವಿಚಾರವನ್ನು ವೀಕ್ಷಕರ ಮುಂದಿಡಲಾಗುವುದು. ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.