ADVERTISEMENT

ಅಕ್ರಮದಿಂದ ಕಾಂಗ್ರೆಸ್ ಗೆಲುವು: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 15:14 IST
Last Updated 1 ಜೂನ್ 2023, 15:14 IST

ತುಮಕೂರು: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಎಚ್.ಡಿ.ರಂಗನಾಥ್ ಅಕ್ರಮ ನಡೆಸಿ ಆಯ್ಕೆ ಆಗಿದ್ದಾರೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಇಲ್ಲಿ ಗುರುವಾರ ಆರೋಪಿಸಿದರು.

ಮತದಾನಕ್ಕೂ ಮುನ್ನ ಕ್ಷೇತ್ರದಲ್ಲಿ ರಂಗನಾಥ್, ಸಂಸದ ಡಿ.ಕೆ.ಸುರೇಶ್ ಅವರು ಗಿಫ್ಟ್ ಕಾರ್ಡ್‌ಗಳನ್ನು ವಿತರಣೆ ಮಾಡಿದ್ದಾರೆ. ಅಭ್ಯರ್ಥಿ ಭಾವಚಿತ್ರ, ಕ್ರಮ ಸಂಖ್ಯೆ, ಬಾರ್ ಕೋಡ್ ಇರುವ 60 ಸಾವಿರ ಕಾರ್ಡ್‌ಗಳನ್ನು ವಿತರಿಸಿ ಅಕ್ರಮವಾಗಿ ಜಯಗಳಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಮತದಾನದ ಬಳಿಕ ಗಿಫ್ಟ್‌ ಕಾರ್ಡ್ ಬಳಸಿ ₹5 ಸಾವಿರ ಮೊತ್ತದ ವಸ್ತುಗಳನ್ನು ಪಡೆದುಕೊಳ್ಳಬಹುದು ಎಂದು ಸುಳ್ಳು ಭರವಸೆ ನೀಡಿದ್ದರು. ಇದು ಮತದಾರರ ಮೇಲೆ ಪರಿಣಾಮ ಬೀರಿದ್ದು, ಗೆಲಲ್ಲು ನೆರವಾಗಿದೆ. ಡಾ.ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ಕೈ. ಚುನಾವಣೆಗೆ ನಾಲ್ಕು ತಿಂಗಳ ಮುಂಚೆಯೇ ಕುಕ್ಕರ್ ಹಂಚಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಸಹ ಗಿಫ್ಟ್ ಕಾರ್ಡ್ ನೀಡಿ ಗೆಲುವು ಸಾಧಿಸಿದ್ದಾರೆ. ಶಾಸಕರ ವಿರುದ್ಧ ಹೈ ಕೋರ್ಟ್‌ನಲ್ಲಿ ದೂರು ದಾಖಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ADVERTISEMENT

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಿಂದಿನ ಶಾಸಕ ಡಿ.ಸಿ.ಗೌರಿಶಂಕರ್ ನಕಲಿ ಬಾಂಡ್ ವಿತರಿಸಿದ ಪ್ರಕರಣದಲ್ಲಿ ನ್ಯಾಯ ಸಿಕ್ಕಿದ್ದು, ಕುಣಿಗಲ್ ಕ್ಷೇತ್ರದಲ್ಲಿ ನಡೆದಿರುವ ಅಕ್ರಮದಲ್ಲೂ ನಮಗೆ ನ್ಯಾಯ ಸಿಗಲಿದೆ. ಕಾಂಗ್ರೆಸ್‌ನ ಸುಳ್ಳಿನ ರಾಜಕಾರಣಕ್ಕೆ ಇದು ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಕುಣಿಗಲ್ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಿ.ಕೃಷ್ಣಕುಮಾರ್, ‘ಮತದಾರರಿಗೆ ಹಂಚಿರುವ ನೂರಾರು ಗಿಫ್ಟ್ ಕಾರ್ಡ್ ಸಂಗ್ರಹಿಸಲಾಗಿದೆ. ಕಾಂಗ್ರೆಸ್‌ಗೆ ಮತ ಹಾಕಿದರೆ ಹಣ ಬರಲಿದೆ ಎಂದು ಮತದಾರರಿಗೆ ಭರವಸೆ ನೀಡಲಾಗಿದೆ. ಮತ ಹಾಕದೇ ಇದ್ದರೆ ಹಣ ಬರುವುದಿಲ್ಲ ಎಂದು ನಕಲಿ ಕಾರ್ಡ್ ನೀಡಿ ವಂಚಿಸಲಾಗಿದೆ. ಈಗ ಕಾಂಗ್ರೆಸ್ ಕಾರ್ಯಕರ್ತರು ಮತದಾರರ ಮನೆ ಬಾಗಿಲಿಗೆ ಹೋಗಿ ನಕಲಿ ಗಿಫ್ಟ್ ಕಾರ್ಡ್ ವಾಪಾಸ್ ನೀಡುವಂತೆ ಕೇಳುತ್ತಿದ್ದಾರೆ’ ಎಂದು ತಿಳಿಸಿದರು.

ಚುನಾವಣೆ ಅಧಿಕಾರಿಗಳು, ಚುನಾವಣಾ ಆಯೋಗ ಸರಿಯಾಗಿ ಕೆಲಸ ಮಾಡಿದ್ದರೆ ಇಂತಹ ಅಕ್ರಮಗಳು ನಡೆಯುತ್ತಿರಲಿಲ್ಲ. ಜೆಡಿಎಸ್, ಬಿಜೆಪಿ ನಡುವೆ ಒಳ ಒಪ್ಪಂದವಾಗಿದ್ದರೆ ನಾನು ಗೆಲುವು ಸಾಧಿಸುತ್ತಿದ್ದೆ. ವಿರೋಧಿಗಳು ಅಪಪ್ರಚಾರ ಮಾಡಿದ್ದು ಸೋಲಿಗೆ ಕಾರಣವಾಯಿತು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡರಾದ ಬಲರಾಂ, ಯಶಸ್, ಬೈರಪ್ಪ, ಸದಾನಂದ, ಜಗದೀಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.